ಚಾಮರಾಜನಗರ:ನಾನು ಏನಿಲ್ಲ ಅಂದ್ರು 20 ಬಾರಿ ಚಾಮರಾಜನಗರಕ್ಕೆ ಬಂದಿದ್ದೇನೆ. ಚಾಮರಾಜನಗರಕ್ಕೆ ಬಂದಾಗಲೆಲ್ಲ ಅಧಿಕಾರ ಕಳೆದುಕೊಳ್ಳುವ ಬದಲು ನನ್ನ ಸಿಎಂ ಕುರ್ಚಿ ಗಟ್ಟಿಯಾಗಿದೆ. ನಾನು ಈಗ ರಾಜಕೀಯ ಕೊನೆಗಾಲದಲ್ಲಿದ್ದೇನೆ. ಜನರ ಪ್ರೀತಿ ಅಭಿಮಾನ ಗಳಿಸದೆ ಇದ್ದರೆ ರಾಜಕೀಯದಲ್ಲಿ ಉಳಿಗಾಲ ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದಲ್ಲಿ ದಾನಿಗಳಿಂದ ಅಭಿವೃದ್ಧಿಗೊಂಡ ಹೈಟೆಕ್ ಸರ್ಕಾರಿ ಶಾಲೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತ್ಯಂತ ಉತ್ಸಾಹದಿಂದ ನಾನು ಶಾಲೆ ಉದ್ಘಾಟನೆ ಮಾಡಿದ್ದೇನೆ. ಚಾಮರಾಜನಗರ ಕರ್ನಾಟಕದ ಕೊನೆ ಜಿಲ್ಲೆಯಾಗಿದ್ದು, ಜಾನಪದ ಕಲೆಗಳ ತವರೂರಾಗಿದೆ. ಈ ಹಿಂದೆ ಚಾಮರಾಜನಗರ ಮೈಸೂರಿನ ಜಿಲ್ಲೆಗೆ ಒಳಪಟ್ಟಿತ್ತು ಎಂದರು.
ಮೂಢನಂಬಿಕೆಯನ್ನು ನಂಬಲಿಲ್ಲ:ಜೆ.ಹೆಚ್.ಪಟೇಲರಿಗೆ ಚಾಮರಾಜನಗರಕ್ಕೆ ಹೋದ್ರೆ ಅಧಿಕಾರ ಕಳೆದುಕೊಳ್ಳುತ್ತೀರ ಅಂತ ಆಗಿನ ಕೆಲ ಶಾಸಕರು ಹೇಳಿ ಇಲ್ಲಿಗೆ ಬರಬಾರದ ರೀತಿ ಮಾಡಿದ್ರು. ಆಗಿನಿಂದ ಆ ಕಳಂಕ ಚಾಮರಾಜನಗರ ಮೇಲಿದೆ. ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿ ಚಾಮರಾಜನಗರಕ್ಕೆ ಬಂದಿದ್ದೇನೆ. ಈ ಮೂಢನಂಬಿಕೆಯನ್ನು ರಾಚಯ್ಯ ಅವರು ನಂಬಲಿಲ್ಲ, ನಾನೂ ನಂಬಲಿಲ್ಲ. ಚಾಮರಾಜನಗರಕ್ಕೆ ಬಂದು ಹೊಸ ಜಿಲ್ಲೆ ಘೋಷಣೆ ಮಾಡಿದ್ವಿ ಎಂದು ತಿಳಿಸಿದರು.