ಬೆಳಗಾವಿ: ನಮ್ಮ ಸರ್ಕಾರ ಇರೋವರೆಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ. ಅಲ್ಲದೇ ಐದು ವರ್ಷ ಅಧಿಕಾರವನ್ನೂ ನಡೆಸುತ್ತಾರೆ. ಇನ್ನು ನಾನು ಸಿಎಂ ಆಕಾಂಕ್ಷಿ ಅಲ್ಲವೇ ಅಲ್ಲ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿಎಂ ಕುರ್ಚಿ ಖಾಲಿ ಇದ್ದಾಗ ಕ್ಲೇಮ್ ಮಾಡಬೇಕು. ಈಗ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ. ಇನ್ನು ಸತೀಶ್ ಜಾರಕೊಹೊಳಿ ಸ್ಪಷ್ಟವಾಗಿ ಹೇಳಿದ್ದಾರೆ, ನಾನು ಈಗ ಸಿಎಂ ಆಕಾಂಕ್ಷಿ ಅಲ್ಲ ಅಂದಿದ್ದಾರೆ. ಸತೀಶ್ ಜಾರಕಿಹೊಳಿ ಒಳ್ಳೆಯ, ಸಜ್ಜನ ರಾಜಕಾರಣಿ ಎಂದು ಆರ್.ವಿ. ದೇಶಪಾಂಡೆ ಹೊಗಳಿದ್ದಾರೆ.
ನಾನೂ ಸೀನಿಯರ್ ಎಂಬ ಸಚಿವ ಎಂ.ಬಿ.ಪಾಟೀಲ ಹೇಳಿಕೆಗೆ ಪ್ರತಿಕ್ರಿಯಿಸಿದ ಆರ್.ವಿ.ದೇಶಪಾಂಡೆ, ನಾವು ಅಧಿಕಾರಕ್ಕೆ ಬಂದು ವರ್ಷ ಆಗಿದೆ. ನಮಗೆ ಇನ್ನೂ ನಾಲ್ಕು ವರ್ಷ ಅವಕಾಶವಿದೆ. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾರೆ. ಹೀಗಿರುವಾಗ ನಾವು ಸಿಎಂ ಬದಲಾವಣೆ ಬಗ್ಗೆ ಮಾತನಾಡೋದು ತಪ್ಪಾಗುತ್ತದೆ. ಸಿದ್ದರಾಮಯ್ಯ ಬದಲಾವಣೆ ವಿಚಾರ ನನಗೆ ಕಾಣಿಸುತ್ತಿಲ್ಲ. ಸಿಎಂ ಬದಲಾವಣೆ ಇಲ್ಲ, ಈ ಬಗ್ಗೆ ಹೈಕಮಾಂಡ್ ಕೂಗು ಇಲ್ಲ. ಅನಾವಶ್ಯಕವಾಗಿ ಈ ಬಗ್ಗೆ ಮಾತು ಕೇಳಿ ಬರುತ್ತಿದೆ. ಸಿಎಂ ಬದಲಾವಣೆ ಆಗುತ್ತಾರೆ ಎಂದು ಯಾರು ಹೇಳಿದ್ದು ಎಂದು ಮರು ಪ್ರಶ್ನಿಸಿದರು.
ಮುಡಾ ಪ್ರಕರಣದಲ್ಲಿ ವ್ಯತಿರಿಕ್ತ ತೀರ್ಪು ಬರಲ್ಲ:ನಾನೂ ಒಬ್ಬ ವಕೀಲನಾಗಿದ್ದು, ಮುಡಾ ಹಗರಣದಲ್ಲಿ ಕೋರ್ಟ್ನಿಂದ ವ್ಯತಿರಿಕ್ತ ಪರಿಣಾಮ ಬರಲು ಸಾಧ್ಯವಿಲ್ಲ. ಮುಡಾದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ತಪ್ಪು ಹೆಜ್ಜೆ ಇಟ್ಟಿಲ್ಲ. ಇದು ಸರಿಯಲ್ಲ ಅಂತಾ ಕೋರ್ಟ್ ಆದೇಶ ನೀಡುತ್ತದೆ ಎಂದು ಆರ್.ವಿ.ದೇಶಪಾಂಡೆ ಸಮರ್ಥಿಸಿಕೊಂಡರು.