ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ (ETV Bharat) ನೆಲಮಂಗಲ (ಬೆಂಗಳೂರು): ನೆಲಮಂಗಲ ತಾಲೂಕಿನ ದಾಬಸ್ಪೇಟೆಯಲ್ಲಿ ಈ ದಾರುಣ ಘಟನೆ ನಡೆದಿದ್ದು, ಸುಟ್ಟು ಕರಕಲಾದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾಗಿದೆ. ಫೋನ್ ಕರೆಯನ್ನು ಸ್ವೀಕರಿಸದ ಹಿನ್ನೆಲೆ ಸಂಶಯಗೊಂಡ ತವರು ಮನೆಯವರು ಬಂದು ನೋಡಿದಾಗ ಮಗಳ ಶವ ಬಾತ್ ರೂಮ್ನಲ್ಲಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮೃತಳ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದರು.
ಪ್ರಕರಣ ಹಿನ್ನೆಲೆ: ಕಾವ್ಯ (27) ಮೃತ ಮಹಿಳೆ. ಮೂಲತಃ ಹಾಸನ ಜಿಲ್ಲೆ ಹೊಳೇನರಸಿಪುರ ತಾಲೂಕಿನ ಮಾವಿನಕೆರೆ ಗ್ರಾಮದರಾದ ಕಾವ್ಯ, ಇದೇ ಜಿಲ್ಲೆಯ ಆಲೂರು ತಾಲೂಕಿನ ಮಣಿಪುರದ ಶಿವಾನಂದ್ ಎಂಬುವರನ್ನು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
''ಪತಿ ಶಿವಾನಂದ್ ದಾಬಸ್ಪೇಟೆಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಈ ದಂಪತಿಯು ತಮ್ಮ ಇಬ್ಬರು ಮಕ್ಕಳೊಂದಿಗೆ ದಾಬಸ್ ಪೇಟೆಯಲ್ಲಿ ವಾಸವಾಗಿದ್ದರು. ಆದರೆ, ಶಿವಾನಂದ್ ಇತ್ತೀಚೆಗೆ ಕುಡಿತದ ಚಟಕ್ಕೆ ದಾಸನಾಗಿದ್ದರಿಂದ ಆತನ ಆರೋಗ್ಯ ಹದಗೆಟ್ಟಿತ್ತು. ಕೆಲಸದಿಂದ ಸ್ವಯಂ ನಿವೃತ್ತಿ ಕೂಡ ತೆಗೆದುಕೊಂಡಿದ್ದ ಆತ ಮನೆಯಲ್ಲಿಯೇ ಇದ್ದ. ಆರೋಗ್ಯ ಮತ್ತು ಕೆಲಸದ ಕಾರಣಕ್ಕಾಗಿ ಸಂಸಾರದಲ್ಲಿ ಬಿರುಕು ಮೂಡಿತ್ತು. ಇದೇ ವಿಚಾರಕ್ಕೆ ಗಂಡ-ಹೆಂಡತಿ ಮಧ್ಯೆ ಜಗಳವಾಗುತ್ತಿತ್ತು. ಸಂಸಾರಿಕ ಜಗಳದಿಂದ ಬೇಸರಗೊಂಡಿದ್ದ ಕಾವ್ಯ, ತನ್ನ ಮಕ್ಕಳೊಂದಿಗೆ ಇತ್ತೀಚೆಗೆ ತವರು ಮನೆಗೆ ಸೇರಿದ್ದರು. ಬಳಿಕ ಎಲ್ಲ ಸಮಸ್ಯೆ ಬಗೆಹರಿಸಿದ ಪೋಷಕರು, ಕಾವ್ಯಳನ್ನು ಮತ್ತೆ ಗಂಡನ ಮನೆಗೆ ಕಳುಹಿಸಿದ್ದರು. ಮಗಳ ಯೋಗಕ್ಷೇಮ ವಿಚಾರಿಸಲು ಆಗಾಗ್ಗೆ ಕಾವ್ಯಗೆ ಫೋನ್ ಮಾಡುತ್ತಿದ್ದರು. ಕಳೆದ ಶನಿವಾರ ಫೋನ್ ಮಾಡಿದಾಗ ಶಿವಾನಂದ್, ಕಾವ್ಯ ಮಲಗಿದ್ದಾಳೆಂದು ಹೇಳಿದ್ದನು. ಬಳಿಕ ಮತ್ತೆ ಫೋನ್ ಮಾಡಿದಾಗ ಏನೇನೋ ಸುಳ್ಳು ಉತ್ತರ ನೀಡಿದ್ದ. ಇದರಿಂದ ಕಾವ್ಯ ಪೋಷಕರಿಗೆ ಅನುಮಾನ ಬಂದಿತ್ತು. ತಕ್ಷಣ ತವರು ಮನೆಯವರು ಬಂದು ನೋಡಿದಾಗ ಕಾವ್ಯ ಶವವಾಗಿ ಪತ್ತೆಯಾಗಿದ್ದಾಳೆ''.
''ಸೋಮವಾರ ಬೆಳಗ್ಗೆ ವಿಷಯ ತಿಳದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಬಂದು ನೋಡಿದಾಗ ಮಹಿಳೆಯ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಕಂಡು ಬಂದಿತು. ಮೇಲ್ನೋಟಕ್ಕೆ ಪತಿಯೇ ಈ ಕೃತ್ಯ ಎಸಗಿರುವುದಾಗಿ ಅನುಮಾನ ವ್ಯಕ್ತವಾಗುತ್ತಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆರೋಪಿ ಪತಿಯನ್ನು ಬಂಧಿಸಲಾಗಿದೆ. ಈ ಬಗ್ಗೆ ದೂರು ಕೂಡ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ'' ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಓದಿ:ತಣ್ಣೀರುಬಾವಿ ಕಿನಾರೆಯಲ್ಲಿ ಮೀನುಗಾರರಿಂದ ಸಮುದ್ರಪೂಜೆ - Samudra Puja