ಕರ್ನಾಟಕ

karnataka

ETV Bharat / state

ಶಿಗ್ಗಾಂವ್​ ಉಪಚುನಾವಣೆ ; ಟಿಕೆಟ್ ಆಕಾಂಕ್ಷಿಗಳಿಂದ ನಾನಾ ಕಸರತ್ತು - shiggaon by election

ಶುಕ್ರವಾರ ಶಿಗ್ಗಾಂವ್​ನಲ್ಲಿ ಪಕ್ಷದ ಮುಖಂಡರ ಸಭೆಗೂ ಮುನ್ನ ಟಿಕೆಟ್ ಆಕಾಂಕ್ಷಿಗಳು ಭಾರಿ ಹೈಡ್ರಾಮಾ ನಡೆಸಿದ್ದಾರೆ.

shiggaon
ಶಿಗ್ಗಾಂವ್ (ETV Bharat)

By ETV Bharat Karnataka Team

Published : Jul 5, 2024, 7:58 PM IST

ಸಚಿವ ಈಶ್ವರ್​ಖಂಡ್ರೆ (ETV Bharat)

ಹಾವೇರಿ : ಉಪಚುನಾವಣೆ ಘೋಷಣೆಗೂ ಮುನ್ನವೇ ಹಾವೇರಿ ಜಿಲ್ಲೆ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದಲ್ಲಿ ಬಣ ರಾಜಕೀಯ ತಿಕ್ಕಾಟ ಅತಿರೇಕಕ್ಕೆ ಹೋಗಿದೆ. ಶುಕ್ರವಾರ ಶಿಗ್ಗಾಂವ್​ನಲ್ಲಿ ಪಕ್ಷದ ಮುಖಂಡರ ಸಭೆಗೂ ಮುನ್ನ ಆಕಾಂಕ್ಷಿಗಳಾದ ಅಜ್ಜಂಪೀರ್ ಖಾದ್ರಿ, ಯಾಸೀರ್​ಖಾನ್ ಪಠಾಣ್​, ಆರ್. ಶಂಕರ್ ಅಭಿಮಾನಿಗಳು ಪ್ರತ್ಯೇಕವಾಗಿ ಆಗಮಿಸುವ ಮೂಲಕ ನಾಯಕರ ಗಮನ ಸೆಳೆಯಲು ಮುಂದಾದರು. ಕಾರ್ಯಕ್ರಮಕ್ಕೂ ಮುನ್ನ ಟಿಕೆಟ್ ಆಕಾಂಕ್ಷಿಗಳು ಭಾರಿ ಹೈಡ್ರಾಮಾ ನಡೆಸಿದರು. ಟಿಕೆಟ್ ಆಕಾಂಕ್ಷಿಗಳನ್ನು ಕಾರ್ಯಕರ್ತರು ಹೊತ್ತುಕೊಂಡು ಬಂದು ಆಶ್ಚರ್ಯ ಮೂಡಿಸಿದರು.

ಪರಾಜಿತ ಅಭ್ಯರ್ಥಿ ಯಾಸೀರ್​ಖಾನ್ ಪಠಾಣ್ ಮತ್ತು ಮಾಜಿ ಶಾಸಕ ಅಜ್ಜಂಪೀರ್​ ಖಾದ್ರಿ ಬೆಂಬಲಿಗರು ಘೋಷಣೆ ಕೂಗಿದರು. ಮಾಜಿ ಸಚಿವ ಆರ್. ಶಂಕರ್​ ಅವರನ್ನು ಹೊತ್ತುಕೊಂಡು ಡೊಳ್ಳು ಕುಣಿತದ ಮೂಲಕ ಕಾರ್ಯಕರ್ತರು ಸಭೆಗೆ ಕರೆದುಕೊಂಡು ಬಂದರು.

ತಂಡಗಳು ತಮ್ಮ ತಮ್ಮ ನಾಯಕರ ಪರ ಘೋಷಣೆ ಕೂಗುತ್ತಿದ್ದಂತೆ ಸಚಿವ ಈಶ್ವರ್ ಖಂಡ್ರೆ, ಶಿವಾನಂದ ಪಾಟೀಲ್ ಮೈಕ್ ಹಿಡಿದು ಕಾರ್ಯಕರ್ತರನ್ನ ನಿಯಂತ್ರಿಸಿದರು. ಸಭೆಯಲ್ಲಿ ಜಿಲ್ಲಾಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ಈ ಬಾರಿಯ ಜನ ಬೆಂಬಲ ನೋಡಿದರೆ 100ಕ್ಕೆ ನೂರು ಕಾಂಗ್ರೆಸ್ ಗೆಲುವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮೊನ್ನೆ ಲೋಕಸಭಾ ಕ್ಷೇತ್ರ ಶಿಗ್ಗಾಂವಿಯಲ್ಲಿ ಹೆಚ್ಚು ಮತಗಳು ಬಂದಿವೆ. ಕಾಂಗ್ರೆಸ್ ಬೇರು ಶಿಗ್ಗಾಂವಿಯಲ್ಲಿ ಗಟ್ಟಿ ಇದೆ. ಲೋಕಸಭೆಯಲ್ಲಿ 9 ಸಂಸದರು ಆಯ್ಕೆಯಾಗಿದ್ದಾರೆ. ಕೆಲವು ಅಭ್ಯರ್ಥಿಗಳು ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಆಕಾಂಕ್ಷಿಗಳು ಹೆಚ್ಚು ಜನರು ಇದ್ದರೆ, ಒಬ್ಬರಿಗೆ ಟಿಕೆಟ್ ನೀಡಲಾಗುವುದು. ಯಾರಿಗೆ ಟಿಕೆಟ್ ಕೊಟ್ಟರೂ ಉಪಯೋಗ ‌ಮಾಡಿಕೊಳ್ಳಿ. ಯಾರೇ ಅಭ್ಯರ್ಥಿಯಾದರೂ ಅವರ ಗೆಲುವಿಗೆ ಶ್ರಮ ಹಾಕುತ್ತೇವೆ. ಆಕಾಂಕ್ಷಿಗಳು ಅರ್ಜಿಕೊಡಿ, ತಮ್ಮ ಅಭಿಪ್ರಾಯ ತಿಳಿಸಿ ಎಂದು ಸಚಿವ ಪಾಟೀಲ್ ಮನವಿ ಮಾಡಿದರು.

ಯಾರು ಅಭ್ಯರ್ಥಿ ಅಂತ ಕಾಂಗ್ರೆಸ್ ವರಿಷ್ಠರು ತೀರ್ಮಾನ ಮಾಡ್ತಾರೆ - ಈಶ್ವರ್ ಖಂಡ್ರೆ :ಕಾಂಗ್ರೆಸ್ ಸೋಲಿಸೋ‌ ಶಕ್ತಿ ವಿರೋಧ ಪಕ್ಷದವರಿಗೆ ಇಲ್ಲ. ಆದರೆ, ಇಲ್ಲಿ ಕಾಂಗ್ರೆಸ್​ನವರೇ ಕಾಂಗ್ರೆಸ್ ಪಕ್ಷ ಸೋಲಿಸ್ತಿದ್ದಾರೆ. ಕಾಂಗ್ರೆಸ್ ಯಾರಿಗೆ ಟಿಕೆಟ್​​ ಕೊಟ್ಟರೂ ಗೆಲ್ಲಿಸಬೇಕಿದೆ. ಕಾಂಗ್ರೆಸ್ ವರಿಷ್ಠರೇ ಸರ್ವೆ ಮಾಡ್ತಾರೆ. ಅಂತಿಮವಾಗಿ ಸರ್ವೆ ವರದಿ ಆಧರಿಸಿ ಅಭ್ಯರ್ಥಿ ಘೋಷಣೆ ಮಾಡ್ತಾರೆ ಎಂದು ಹಾವೇರಿ ಉಪ ಚುನಾವಣೆ ಉಸ್ತುವಾರಿ ಸಚಿವ ಈಶ್ವರಖಂಡ್ರೆ ಹೇಳಿದ್ದಾರೆ.

ಶಿಗ್ಗಾಂವಿ ಪಟ್ಟಣದಲ್ಲಿ ನಡೆದ ಉಪಚುನಾವಣೆ ಪೂರ್ವ ಸಿದ್ದತಾ ಸಭೆಯಲ್ಲಿ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ 25 ವರ್ಷ ಆಗಿದೆ. ಇಲ್ಲಿವರೆಗೂ ನಮ್ಮ ಅಭ್ಯರ್ಥಿ ‌ಇಲ್ಲಿ ಗೆದ್ದಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಸಫರ್ ಆಗ್ತಾ ಇದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಬುನಾದಿ ಅಂದರೆ‌ ನಮ್ಮ‌ ಕಾರ್ಯಕರ್ತರು. ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಪಡೆದಿದ್ದರು. ಈ ಉಪಚುನಾವಣೆ ಪ್ರತಿಷ್ಠೆಯ ಚುನಾವಣೆ ಇದು. ನಮಗೆ ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನ ಬಂದಿದೆ. ಜನಪರ, ಜೀವನ ಪರ ಗ್ಯಾರಂಟಿ ಯೋಜನೆ ನೀಡಿದ್ದೇವೆ ಎಂದರು.

ಲೋಕಸಭೆಯಲ್ಲಿ 20 ಸೀಟು ಗೆಲ್ಲುವ ವಿಶ್ವಾಸ ಇತ್ತು. ಬಿಜೆಪಿ ಭಾವನಾತ್ಮಕ ವಿಷಯ ಬಿತ್ತಿ ಹೆಚ್ಚು ಸ್ಥಾನ ಗೆದ್ದಿದ್ದಾರೆ. ಲೋಕಸಭೆಯಲ್ಲಿ ರಾಹುಲ್ ಗಾಂಧಿ ಸಿಂಹದಂತೆ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡುತ್ತಿದ್ದಾರೆ. ಆಧುನಿಕ ಭಾರತ ನಿರ್ಮಾಣ ಮಾಡಿದ್ದು ಕಾಂಗ್ರೆಸ್ ಪಕ್ಷ. ಮತ್ತೆ ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಮಾಡಬೇಕು. ಈಗ ಸುವರ್ಣಾವಕಾಶ ಬಂದಿದೆ. ಇನ್ನು 4 ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರ ಮಾಡುತ್ತೇವೆ. ನಿಮಗೆ ಅವಕಾಶ ಇದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸಿ. ಡಿ ಕೆ ಶಿವಕುಮಾರ್​, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆಯಾಗಲಿದೆ. ನಾವು ಟಿಕೆಟ್ ಘೋಷಣೆ ಮಾಡುತ್ತಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡೋಣ : ನಿಮ್ಮ ಸಮಸ್ಯೆ ಹಾಗೂ ಅಭಿಪ್ರಾಯ ಸಂಗ್ರಹ ಸಭೆ ಇದು. ಆಗಸ್ಟ್ ಮೊದಲು, ಮೂರನೇ ವಾರದಲ್ಲಿ ಚುನಾವಣೆ ಬರುವ ಸಾಧ್ಯತೆ ಇದೆ. ಟಿಕೆಟ್ ಆಕಾಂಕ್ಷಿಗಳು ಹೆಚ್ಚು ಜನರು ಇದ್ದಾರೆ. ಕಾಂಗ್ರೆಸ್​ನವರು ಕಾಂಗ್ರೆಸ್ ಪಕ್ಷವನ್ನ ಸೋಲಿಸುತ್ತಿದ್ದಾರೆ. ಬೇರೆ ಪಕ್ಷದಿಂದ ಸೋಲಿಸಲು ಸಾಧ್ಯವಿಲ್ಲ. ನೀವು ಸಂಘಟನೆಯಿಂದ ಕೆಲಸ ಮಾಡಿ. ವಿರೋಧಿಗಳ ಮುಂದೆ ಭಿನ್ನಾಭಿಪ್ರಾಯ ತೋರಿಸಿಬೇಡಿ. ಮುಂದೆ ಪಕ್ಷ, ನಿಗಮಮಂಡಳಿ ಹಾಗೂ ವಿವಿಧ ಸ್ಥಾನಮಾನ ನೀಡುತ್ತಾರೆ. ಪಕ್ಷ ಸಂಘಟನೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡೋಣ ಎಂದರು.

ಇದನ್ನೂ ಓದಿ :ಶಿಗ್ಗಾಂವ್ ವಿಧಾನಸಭೆ ಉಪಚುನಾವಣೆ: ಎರಡು ಪಕ್ಷಗಳಿಗೂ ಪ್ರತಿಷ್ಠೆಯಾದ ಕಣ - Shiggaon Assembly By Election

ABOUT THE AUTHOR

...view details