ಹುಬ್ಬಳ್ಳಿ:ಅಂಜಲಿ ಅಂಬಿಗೇರ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಈ ವೇಳೆ ಪ್ರತಿಭಟನಾ ವೇದಿಕೆಗೆ ಆಗಮಿಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸ್ವಾಮೀಜಿಗಳಿಂದ ಮನವಿ ಸ್ವೀಕರಿಸಿದರು.
ಇದೇ ವೇಳೆ, ಪ್ರತಿಭಟನೆ ನೇತೃತ್ವ ವಹಿಸಿದ್ದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಹುಬ್ಬಳ್ಳಿಯಲ್ಲಿ ಎರಡು ಅಮಾನುಷ ಘಟನೆ ನಡೆದಿವೆ. ಸಮಾಜ ಹಾಗೂ ಕಾನೂನು ತಲೆ ತಗ್ಗಿಸುವುಂತಾಗಿದೆ. ಆರೋಪಿಗಳಿಗೆ ಕಾನೂನು ಭಯಯಿಲ್ಲದಿರುವುದು ಆಗಿದೆ. ನಿರ್ಲಕ್ಷ್ಯ ಮಾಡುವುದಾದರೆ ಪೊಲೀಸ್ ಇಲಾಖೆ ಯಾಕೆ ಬೇಕು. ಹೋರಾಟ ಹತ್ತಿಕ್ಕಲು ಪೊಲೀಸ್ ಇದೆಯೇ ಹೊರತು ಅನ್ಯಾಯ ಹತ್ತಿಕ್ಕಲು ಪೊಲೀಸ್ ಇಲಾಖೆ ಇಲ್ಲ ಎಂದು ಆರೋಪಿಸಿದರು.
ಸರ್ಕಾರ ಈ ಕಡೆ ಗಮನ ಹರಿಸುತ್ತಿಲ್ಲ. ನೇಹಾ ಹತ್ಯೆಯಾದಾಗ ರಾಜ್ಯ ಸರ್ಕಾರ ಕಠಿಣ ಕಾನೂನು ತಂದಿಲ್ಲ. ಅಂಜಲಿ ಕುಟುಂಬಕ್ಕೆ ದೊಡ್ಡ ಮೊತ್ತದ ಪರಿಹಾರ, ಮನೆ ಹಾಗೂ ಸರ್ಕಾರಿ ನೌಕರಿ ಕೊಡಬೇಕು. ವಿಶೇಷ ನ್ಯಾಯಾಲಯ ರಚಿಸಿ ಎರಡು ಪ್ರಕರಣದ ಆರೋಪಿಗಳಿಗೆ ಮರಣ ದಂಡನೆ ವಿಧಿಸಬೇಕು. ಪರಿಹಾರ ಸಿಗದಿದ್ದರೆ ನಾವೆಲ್ಲರೂ ಸೇರಿ ಸಿಎಂ ಹತ್ತಿರ ಹೋಗಿ ನ್ಯಾಯಕ್ಕಾಗಿ ಆಗ್ರಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ಜಿಲ್ಲಾಧಿಕಾರಿಗಳಿಗೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯ ಮಂಡಿಸಿದರು.
ಮನಸೂರು ಮಠದ ರೇವಣ್ಣ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಅಂಜಲಿ ಕೊಲೆ ಆರೋಪಿಯನ್ನು ಸುಮ್ಮನೇ ಬಿಡುವುದು ಬೇಡ.
ಪೊಲೀಸರು ರಕ್ಷಕರಲ್ಲ ಭಕ್ಷಕರು. ನನ್ನ ಪ್ರಾಣ ಹೋದರು ಪರವಾಗಿಲ್ಲ. ನೇಹಾ ಹಾಗೂ ಅಂಜಲಿಗೆ ನ್ಯಾಯ ಕೊಡಿಸುತ್ತೇನೆ. ಸರ್ಕಾರಗಳು ಏನು ಮಾಡುತ್ತಾ ಇವೆ. ಇದೇ ರೀತಿ ನಿರ್ಲಕ್ಷ್ಯ ಮಾಡಿದರೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಇದು ಎಚ್ಚರಿಕೆ ನಿಮಗೆ, ಸರ್ಕಾರಕ್ಕೆ ತಾಕತ್ ಇಲ್ವ. ಪೊಲೀಸರ ವೈಫಲ್ಯ ಎರಡು ಪ್ರಕರಣದಲ್ಲಿ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.