ಸಿದ್ದರಾಮಯ್ಯ ಬಜೆಟ್ಗೆ ಪ್ರತಿಕ್ರಿಯೆ ಹುಬ್ಬಳ್ಳಿ:"ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷಿಸಲಾಗಿದೆ. ಹೀಗಾಗಿ ಇದೊಂದು ನಿರಾಶದಾಯಕ ಬಜೆಟ್. ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಕೆಲವು ಘೋಷಣೆಗಳನ್ನು ಮಾಡಲಾಗಿದೆ. ಆದರೆ ಇನ್ನುಳಿದ ಕರ್ನಾಟಕಕ್ಕೆ ಒತ್ತು ನೀಡಿದಂತೆ ಉತ್ತರ ಕರ್ನಾಟಕಕ್ಕೂ ಒತ್ತು ನೀಡಬೇಕಿತ್ತು" ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್.ಎಫ್.ಸಂಶಿಮಠ ಹೇಳಿದರು.
ನಗರದಲ್ಲಿಂದು ಪ್ರತಿಕ್ರಿಯಿಸಿದ ಅವರು, "ಆರೋಗ್ಯ, ಶಿಕ್ಷಣ, ತೋಟಗಾರಿಕೆ ಸೇರಿದಂತೆ ಎಲ್ಲ ವಿಭಾಗಗಳಿಗೂ ಕೆಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಆದರೆ ಯಾವುದನ್ನೂ ಅವರು ಕಾರ್ಯರೂಪಕ್ಕೆ ತರುವುದಿಲ್ಲ. ಈ ಘೋಷಣೆಗಳು ಜಾರಿಗೆ ಬರಲು ಇಪ್ಪತ್ತು ವರ್ಷಗಳು ಬೇಕು. ಹೀಗಾಗಿ ಈ ಬಜೆಟ್ ಅನ್ನು ನಾನು ಸ್ವಾಗತಿಸುವುದಿಲ್ಲ. ಇದೊಂದು ಆಸೆಗಳನ್ನು ಹುಟ್ಟು ಹಾಕಿದ ಬಜೆಟ್" ಎಂದು ತಿಳಿಸಿದರು.
"ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಜವಳಿ ಪಾರ್ಕ್, ಕಳಸಾ ಬಂಡೂರಿ, ಕೋಲ್ಡ್ ಸ್ಟೋರೇಜ್, ಎಪಿಎಂಸಿ ಅಭಿವೃದ್ಧಿ, ಕೈಗಾರಿಕೆ ಅಭಿವೃದ್ಧಿ ಬರೀ ಇದನ್ನೇ ಹದಿನೈದು ವರ್ಷಗಳಿಂದ ಹೇಳಿಕೊಂಡು ಬರುತ್ತಿದ್ದಾರೆ. ಇವು ಇನ್ನೂ ಕಾರ್ಯರೂಪಕ್ಕೇ ಬಂದಿಲ್ಲ" ಎಂದರು.
ಬೆಂಗಳೂರಿಗೆ ಸಿಕ್ಕ ಸ್ಥಾನಮಾನ ಉತ್ತರ ಕರ್ನಾಟಕಕ್ಕೆ ಇಲ್ಲ:ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಕಾರ್ಯದರ್ಶಿ ರವೀಂದ್ರ ಬಳಿಗಾರ ಮಾತನಾಡಿ, "ಒಳ್ಳೆಯ ಬಜೆಟ್. ರಾಜ್ಯದ ಎಲ್ಲ ಜನರನ್ನೂ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದ್ದಾರೆ. ಆದರೆ ನಮ್ಮ ಬೇಡಿಕೆಗಳು ಈ ಬಜೆಟ್‌ನಲ್ಲಿ ಈಡೇರಿಲ್ಲ. ಬೆಂಗಳೂರಿಗೆ ಸಿಕ್ಕ ಸ್ಥಾನಮಾನ ಉತ್ತರ ಕರ್ನಾಟಕಕ್ಕೆ ಸಿಕ್ಕಿಲ್ಲ. ಚೇಂಬರ್ ಆಫ್ ಕಾಮರ್ಸ್‌ನಿಂದ ಆಗ್ರಿಕಲ್ಚರ್ ಈಕ್ವಿಪ್‌ಮೆಂಟ್ಸ್, ಸಾಫ್ಟ್‌ವೇರ್ ಪಾರ್ಕ್ ಕೇಳಿದ್ದೆವು, ಅವು ಬರಲಿಲ್ಲ. ಕೈಗಾರಿಕೆಗಳಿಗೆ, ಸ್ಟಾರ್ಟಪ್ಗಳಿಗೆ ಹೆಚ್ಚಿನ ಒತ್ತು ನೀಡಬೇಕಿತ್ತು. ಇದೊಂದು ಸಮಾಧಾನಕರ ಬಜೆಟ್ ಎನ್ನಬಹುದು" ಎಂದರು.
ಬಜೆಟ್‌ನಲ್ಲಿ ಎಲ್ಲ ವಲಯಕ್ಕೂ ಆದ್ಯತೆ:ಚಾರ್ಟರ್ಡ್ ಅಕೌಂಟೆಂಟ್ ಚನ್ನವೀರ ಮಂಗಳವಾಡಿ ಮಾತನಾಡಿ, "ಐದು ಗ್ಯಾರಂಟಿಗಳ ನಡುವೆ ಎಲ್ಲ ವರ್ಗಗಳಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಎಲ್ಲವನ್ನೂ ಒಂದು ವರ್ಷದಲ್ಲಿ ಜಾರಿಗೆ ತರಲು ಸಾಧ್ಯವೇ ಎಂಬ ಪ್ರಶ್ನೆಯಿದೆ. ಇವೆಲ್ಲವನ್ನೂ ಜಾರಿಗೆ ತಂದರೆ ಇದೊಂದು ಅತ್ಯುತ್ತಮ ಬಜೆಟ್ ಆಗುತ್ತದೆ. ಆದರೆ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಒತ್ತು ಕೊಟ್ಟಿಲ್ಲ. ಕ್ರೀಡಾಳುಗಳಿಗೆ ಪ್ರೋತ್ಸಾಹಧನ ಘೋಷಣೆ ಮಾಡಿದ್ದು ಸ್ವಾಗತಾರ್ಹ" ಎಂದು ತಿಳಿಸಿದರು.
ಇದನ್ನೂಓದಿ:ಹೋಮ್ ಡೆಲಿವರಿ ಆ್ಯಪ್ ಮೂಲಕ ಹಿರಿಯ ನಾಗರಿಕರಿಗೆ ಮನೆ ಬಾಗಿಲಿಗೆ ಅನ್ನ ಸುವಿಧಾ ಯೋಜನೆ