ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಆಡಳಿತ ಮಂಡಳಿ ಚುನಾವಣೆ ಹುಬ್ಬಳ್ಳಿ:ನಗರದ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಸಂಸ್ಥೆಯ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಮಾಜಿ ಸಚಿವ ಎ ಎಂ ಹಿಂಡಸಗೇರಿ ಬಣ ಗೆಲುವು ಸಾಧಿಸಿದೆ. ಚುನಾವಣೆಯಲ್ಲಿ ಆಟೋರಿಕ್ಷಾ, ಹೆಲಿಕಾಪ್ಟರ್‌ನ್ನು ಹಿಂದಿಕ್ಕುವ ಮೂಲಕ ಟ್ರ್ಯಾಕ್ಟರ್ ಕಮಾಲ್ ಮಾಡಿದೆ.
ನಾಲ್ಕು ಬಣಗಳ ಜಿದ್ದಾಜಿದ್ದಿಯ ಪೈಪೋಟಿಯಲ್ಲಿ ಮುಸ್ಲಿಂ ಸಮುದಾಯ ಹಿರಿತನಕ್ಕೆ ಮಣೆ ಹಾಕಿದೆ. ಹಿಂಡಸಗೇರಿ ಬಣದ ಎಲ್ಲಾ 52 ಉಮೇದುವಾರರು ಆಯ್ಕೆಯಾಗಿ ಹೊಸ ಇತಿಹಾಸ ಬರೆದಿದ್ದು, ಅಭೂತಪೂರ್ವ ಗೆಲುವು ದಾಖಲಿಸಿದೆ.
ಭಾನುವಾರ ತಡರಾತ್ರಿಯವರೆಗೆ ಮತ ಎಣಿಕೆ ನಡೆದು ತದನಂತರ ಫಲಿತಾಂಶ ಘೋಷಿಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಿಂಡಸಗೇರಿಯವರು 3789 ಮತ ಪಡೆಯುವ ಮೂಲಕ ಗೆಲವು ಸಾಧಿಸಿದರು. ಹೊನ್ನಳ್ಳಿ ಗುಂಪಿನ ಎನ್ ಡಿ ಗದಗಕರ 1899 ಮತ ಪಡೆದರು. ಇದುವರೆಗೆ ಅಧ್ಯಕ್ಷರಾಗಿದ್ದ ಮಹ್ಮದ ಯೂಸೂಫ್ ಸವಣೂರಗೆ 1225 ಮತ ಬಂದರೆ, ಮಜರಖಾನ್ 1128 ಮತ ಪಡೆದು ಹಿನ್ನೆಡೆ ಅನುಭವಿಸಿದರು.
ಉಪಾಧ್ಯಕ್ಷರಾಗಿ ಹಿಂಡಸಗೇರಿ ಗುಂಪಿನ ಎ.ಎ. ಅತ್ತಾರ 3602 ಮತ ಪಡೆದು ಗೆಲುವು ಸಾಧಿಸಿದರು. ಹೊನ್ನಳ್ಳಿ ಗುಂಪಿನ ವಹಾಬ್ ಮುಲ್ಲಾ 2068 ಮತ ಪಡೆದು ದ್ವಿತೀಯ ಸ್ಥಾನ ಪಡೆದು ಸೋಲು ಅನುಭವಿಸಿದರು.
ಕಾರ್ಯದರ್ಶಿಯಾಗಿ ಬಶೀರ್ ಹಳ್ಳೂರ 3544 ಮತ ಪಡೆದು ಆಯ್ಕೆಯಾದರೆ, ಮಹ್ಮದ ಆರೀಫ್ ಮುಜಾವರ್ 2139 ಮತ ಪಡೆದರು. ಖಜಾಂಚಿಯಾಗಿ ದಾದಾ ಹಯಾತ್ ಖೈರಾತಿ 3609 ಮತ ಪಡೆದರೆ, ನಾಸೀರ ಅಸುಂಡಿ 2206 ಮತ ಪಡೆದು ಹಿನ್ನೆಡೆ ಅನುಭವಿಸಿದರು.
ಜಂಟಿ ಕಾರ್ಯದರ್ಶಿಯಾಗಿ ಮಹ್ಮದ ರಫೀಕ್ ಬಂಕಾಪುರ 3636 ಮತ ಪಡೆದು ಚುನಾಯಿತರಾದರೆ, ಗೈಬು ಸಾಬ ಹೊನ್ಯಾಳ 2066 , ಅಲ್ಲದೇ ಅಸ್ಪತ್ರೆ ಮಂಡಳಿ ಕಾರ್ಯದರ್ಶಿಯಾಗಿ ಮಹ್ಮದ ಇರ್ಷಾದ ಬಳ್ಳಾರಿ 3604 ಮತದೊಂದಿಗೆ ಗೆಲುವು ಸಾಧಿಸಿದರೆ, ಹೊನ್ನಳ್ಳಿ ಗುಂಪಿನ ಆಸೀಫ್ ಬಳ್ಳಾರಿ 1919 ಮತ ಪಡೆದು ಸೋಲು ಅನುಭವಿಸಿದರು.
ಕಳೆದ ಚುನಾವಣೆಯಲ್ಲಿ ಸಹ ಯುಸೂಪ್ ಸವಣೂರ ಬಣ ಬೆಂಬಲಿಸಿದ್ದ ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಈ ಸಲ ಹಿಂಡಸಗೇರಿ ಗುಂಪಿನೊಂದಿಗೆ ಗುರುತಿಸಿಕೊಂಡು ನಿರ್ಣಾಯಕ ಪಾತ್ರ ವಹಿಸಿದರು. ತಡರಾತ್ರಿ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಹಿಂಡಸಗೇರಿ ಬಣದ ಬೆಂಬಲಿಗರು ಪರಸ್ಪರ ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು.
ಅಂಜುಮನ್ ಚುನಾವಣೆಯಲ್ಲಿ ವಿಜೇತರಾದ ಹಿಂಡಸಗೇರಿ ಹಾಗೂ ಗುಂಪಿನ ಸದಸ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಎಚ್.ಕೆ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಅಭಿನಂದಿಸಿದ್ದಾರೆ.
ಇದನ್ನೂಓದಿ:ಅಲ್ಪಸಂಖ್ಯಾತರ ಅಭಿವೃದ್ಧಿ ವಿಚಾರ: ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು, ಸಚಿವರ ಮಧ್ಯೆ ಜಟಾಪಟಿ