ಹುಬ್ಬಳ್ಳಿ:ಅಕ್ರಮ ಜಾಹೀರಾತು, ಆಶ್ಲೀಲ ವಿಡಿಯೋ, ಸಾರ್ವಜನಿಕರಿಗೆ ಹಿಂಸೆ ನೀಡುವ ಸಂದೇಶ ಕಳಹಿಸುತ್ತೀರಿ ಎಂದು ಮುಂಬೈ ಪೊಲೀಸರ ಹೆಸರಿನಲ್ಲಿ ಬೆದರಿಸಿ ಧಾರವಾಡದ ನಿವೃತ್ತ ಬ್ಯಾಂಕ್ ನೌಕರನಿಗೆ ಬರೋಬ್ಬರಿ 95.50 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಧಾರವಾಡದ ಗಣಪತಿ ಎಸ್ ಎಂಬುವರು ಹಣ ಕಳೆದುಕೊಂಡಿದ್ದು, ಈ ಕುರಿತು ಹು-ಧಾ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 'ವಾಟ್ಸಪ್ ಮೂಲಕ ಸಂಪರ್ಕ ಮಾಡಿರುವ ಅಪರಿಚಿತರು ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಯೊಂದನ್ನು ತೋರಿಸಿ, ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಹೇಳಿ ಹೆದರಿಸಿದ್ದಾರೆ. ನಂತರ ಬ್ಯಾಂಕ್ ಖಾತೆಗಳ ಮಾಹಿತಿ ಪಟೆದುಕೊಂಡು ಕೇಸ್ನಿಂದ ಪಾರು ಮಾಡುವುದಾಗಿ ನಂಬಿಕೆ ಬರುವಂತೆ ಮಾತನಾಡಿ ಸೆ.27ರಂದು 62.50 ಲಕ್ಷ ಮತ್ತು ಅ.7ರಂದು 26 ಲಕ್ಷ ಹಾಗೂ ಅ.8ರಂದು 7 ಲಕ್ಷ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹೂಡಿಕೆ ಹೆಸರಲ್ಲಿ 11.24 ಲಕ್ಷ ವಂಚನೆ:ಷೇರು ಮಾರುಕಟ್ಟೆಯಲ್ಲಿಹೂಡಿಕೆ ಮಾಡಿಸಿ ಲಾಭ ಕೊಡುವುದಾಗಿ ನಂಬಿಸಿ ನಗರದ ವ್ಯಕ್ತಿಗೆ 11.24 ಲಕ್ಷ ರೂಪಾಯಿ ವಂಚಿಸಲಾಗಿದೆ. ನಗರದ ಮಂಜುನಾಥ ಎಸ್ ಹಣ ಕಳೆದುಕೊಂಡವರು.
'ಮೊದಲು ಪೆನ್ನಿ ಸ್ಟಾಕ್ ಮಾಹಿತಿ ಕೊಟ್ಟು ಶೇ.20 ರಷ್ಟು ಲಾಭ ಮಾಡಿಕೊಟ್ಟಿದ್ದರು. ನಂತರ ಶೇ.200 ರಷ್ಟು ಲಾಭ ಕೊಡುವುದಾಗಿ ಹೇಳಿ 11.24 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ಅನಯ ಸ್ಮಿತ್, ಗೀತಿಕಾ ಆನಂದ, ಮೋತಿಲಾಲ್ ಓಸ್ವಾಲ್ ಎಂಬುವರು ಮೋಸ ಮಾಡಿದ್ದಾರೆ' ಎಂದು ಹು-ಧಾ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮಜುನಾಥ್ ಪ್ರಕರಣ ದಾಖಲಿಸಿದ್ದಾರೆ.