ಹು-ಧಾ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ (ETV Bharat) ಹುಬ್ಬಳ್ಳಿ:ಪೊಲೀಸರ ಮೇಲೆಯೇ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ ಕುಖ್ಯಾತ ಅಂತರ್‌ರಾಜ್ಯ ಕಳ್ಳನ ಕಾಲಿಗೆ ಹುಬ್ಬಳ್ಳಿ ಪೊಲೀಸರು ಗುಂಡು ಹೊಡೆದು ಸೆರೆ ಹಿಡಿದಿದ್ದಾರೆ.
ಮುಂಬೈ ಮೂಲದ ಫರ್ಹಾನ್ ಶೇಖ್ ಎಂಬಾತನ ವಿರುದ್ಧ ಕೇಶ್ವಾಪುರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನಾಭರಣ ಅಂಗಡಿ ಕಳ್ಳತನ ಪ್ರಕರಣ ದಾಖಲಾಗಿದೆ. ಅಷ್ಟೇ ಅಲ್ಲದೇ, ಹೈದರಾಬಾದ್, ಕಲಬುರಗಿ, ಅಹ್ಮದ್ ನಗರ, ಸೂರತ್ ಮತ್ತು ಮುಂಬೈನಲ್ಲೂ ಈತನ ವಿರುದ್ಧ ದರೋಡೆ ಹಾಗೂ ಕೊಲೆ ಯತ್ನ ಪ್ರಕರಣಗಳಿವೆ.
ಈ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಶೋಧ ನಡೆಸುತ್ತಿದ್ದ ಕೇಶ್ವಾಪುರ ಪೊಲೀಸರಿಗೆ ಗುರುವಾರ ರಾತ್ರಿ ಆರೋಪಿ ಸೆರೆಸಿಕ್ಕಿದ್ದಾನೆ. ಇಂದು ಇತರ ಸಹಚರರನ್ನು ಬಂಧಿಸಲು ಮುಂದಾಗಿದ್ದರು. ಈ ವೇಳೆ ಹುಬ್ಬಳ್ಳಿಯ ಹೊರವಲಯದ ಗಾಮನಗಟ್ಟಿ ರಸ್ತೆಯ ತಾರಿಹಾಳ ಕ್ರಾಸ್ ಬಳಿ ಫರ್ಹಾನ್ ಶೇಖ್ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಸಬ್ ಇನ್ಸ್ಪೆಕ್ಟರ್ ಕವಿತಾ ಮಾಡಗ್ಯಾಳ ತಕ್ಷಣ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದು, ಇದನ್ನು ಲೆಕ್ಕಿಸದ ಆರೋಪಿಯ ಕಾಲಿಗೂ ಗುಂಡು ಹಾರಿಸಿದ್ದಾರೆ.
ಗಾಯಗೊಂಡ ಪೊಲೀಸ್ ಸಿಬ್ಬಂದಿ (ETV Bharat) ಆರೋಪಿಯ ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದು, ಪೊಲೀಸರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಯೂ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರ್ಯಾಚರಣೆಯಲ್ಲಿ ಗಾಯಗೊಂಡ ಸಿಬ್ಬಂದಿ ಹಾಗೂ ಆರೋಪಿಯ ಆರೋಗ್ಯ ವಿಚಾರಿಸಿದ ಬಳಿಕ ಕಿಮ್ಸ್ ಆಸ್ಪತ್ರೆಯಲ್ಲಿ ಮಾಧ್ಯಮಗಳ ಜೊತೆ ಹು-ಧಾ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಮಾತನಾಡಿದರು.
'ಜು.17 ರಂದು ಕಳ್ಳತನ ಮಾಡಲಾಗಿತ್ತು. ಈ ಗೋಲ್ಡ್ ಶಾಪ್ನಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಗಾರ, ಬೆಳ್ಳಿ ಕಳ್ಳತನವಾಗಿತ್ತು. ಹತ್ತು ದಿನ ನಿರಂತರ ಪ್ರಯತ್ನದಿಂದ ಈ ಕೇಸ್ಗೆ ಸಂಬಂಧಿಸಿದಂತೆ ಮುಂಬೈ ಮೂಲದ ಫರಾನ್ ಶೇಖ್ ಎಂಬ ಆರೋಪಿಯನ್ನು ಬಂಧನ ಮಾಡಲಾಗಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ತನ್ನ ಸಹಚರರನ್ನು ತೋರಿಸಲು ಆತನನ್ನು ಗಾಮನಗಟ್ಟಿ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದೆವು. ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಫರಾನ್ ಶೇಖ್ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ತಪ್ಪಿಸಿಕೊಂಡು ಓಡುತ್ತಿದ್ದ ಆರೋಪಿಯ ಕಾಲಿಗೆ ಗೋಕುಲ ರೋಡ್ ಪೊಲೀಸ್ ಠಾಣೆಯ ಪಿಎಸ್ಐ ಕವಿತಾ ಫೈರ್ ಮಾಡಿ ಹಿಡಿದಿದ್ದಾರೆ. ಆರೋಪಿಯ ಹಲ್ಲೆಯಿಂದ ಪೊಲೀಸ್ ಸಿಬ್ಬಂದಿ ಸುಜಾತ ಮತ್ತು ಮಹೇಶ್ ಗಾಯಗೊಂಡಿದ್ದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಹು-ಧಾ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ತಿಳಿಸಿದರು
ಗಾಯಗೊಂಡ ಪೊಲೀಸ್ ಸಿಬ್ಬಂದಿ (ETV Bharat) ಈತ ಅಂತರಾಜ್ಯ ಕಳ್ಳತನ ಆರೋಪಿಯಾಗಿದ್ದು, ಕೊಲೆ, ಕಳ್ಳತನ ಸೇರಿ ಅನೇಕ ಕೇಸ್ ಇವನ ಮೇಲಿವೆ. ಪ್ರಕರಣ ಸಂಬಂಧ ಇನ್ನಿತರ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸುತ್ತೇವೆ. ಮಹಾರಾಷ್ಟ್ರದಿಂದ ಹುಬ್ಬಳ್ಳಿಗೆ ಬಂದಿದ್ದ ಮೂವರು ಗ್ಯಾಂಗ್, ಹುಬ್ಬಳ್ಳಿ, ಬೆಳಗಾವಿ, ವಿಜಯಪುರ ಜಿಲ್ಲೆಯಲ್ಲಿ ಕಳ್ಳತನ ಮಾಡಲು ಪ್ಲ್ಯಾನ್ ಮಾಡಿದ್ದರು. ಸ್ಥಳೀಯರನ್ನು ಹಣ ಕೊಟ್ಟು ಪರಿಚಯ ಮಾಡಿಕೊಂಡು ಕಳ್ಳತನಕ್ಕೆ ಸ್ಕೆಚ್ ಹಾಕಿದ್ದರು. ಕಳ್ಳರನ್ನು ಬಂಧಿಸಲು ಮೂರು ತಂಡ ಮಹಾರಾಷ್ಟ್ರದಲ್ಲಿ ಬೀಡು ಬಿಟ್ಟಿವೆ ಎಂದು ಪೊಲೀಸ್ ಕಮೀಷನರ್ ಮಾಹಿತಿ ನೀಡಿದರು.
ಇದನ್ನೂ ಓದಿ:ಕಾಡಿನಲ್ಲಿ ಕೊಳೆತು ಹೋಗುತ್ತಿದ್ದ ಸೌಮ್ಯಳ ಮೃತದೇಹ 'ನಾಪತ್ತೆ ಪ್ರಕರಣ'ದಿಂದ ಪತ್ತೆ! ಕೊನೆಗೂ ಹೊರಬಿತ್ತು ಮರ್ಡರ್ ಮಿಸ್ತ್ರಿ - Shivamogga Girl Murder Case