ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ (ETV Bharat) ಹುಬ್ಬಳ್ಳಿ:ಪ್ರೀತಿ ನಿರಾಕರಿಸಿದ್ದಕ್ಕೆ ಇಲ್ಲಿನ ವೀರಾಪುರ ಓಣಿಯ ಯುವತಿ ಅಂಜಲಿ (20) ಕೊಲೆಗೈದ ಆರೋಪಿಯನ್ನು ಗುರುವಾರ ತಡರಾತ್ರಿ ದಾವಣಗೆರೆಯಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಪೊಲೀಸರು ಬಂಧಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ (21) ಎಂಬಾತನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಅವರು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿದ್ದಾರೆ. ಗಾಯಗೊಳ್ಳಲು ಕಾರಣ ಏನೆಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಚಿಕಿತ್ಸೆ ಪಡೆಯುತ್ತಿರುವ ಆರೋಪಿಯನ್ನು ಇಂದು ಸಾಯಂಕಾಲದ ಒಳಗೆ ಕೋರ್ಟ್ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.
ಬುಧವಾರ ಮುಂಜಾನೆ ಅಂಜಲಿ ಮನೆಗೆ ನುಗ್ಗಿದ ಆರೋಪಿ ಚಾಕುವಿನಿಂದ ಎದೆ, ಹೊಟ್ಟೆ ಹಾಗೂ ಕುತ್ತಿಗೆ ಇರಿದು ಪರಾರಿಯಾಗಿದ್ದ. ಕೊಲೆ ಖಂಡಿಸಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪ್ರಕರಣದ ತನಿಖೆಗಾಗಿ ಎರಡು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು.
ಕಿಮ್ಸ್ ಆಸ್ಪತ್ರೆಗೆ ಪೊಲೀಸ್ ಕಮೀಷನರ್ ಭೇಟಿ (ETV Bharat) ಕಮೀಷನರ್ ಪ್ರತಿಕ್ರಿಯೆ:ಈ ಬಗ್ಗೆಮಾಧ್ಯಮದವರೊಂದಿಗೆ ಮಾತನಾಡಿದ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್, ''ಅಂಜಲಿ ಕೊಲೆ ಪ್ರಕರಣದ ಆರೋಪಿಯನ್ನು ನಿನ್ನೆ ರಾತ್ರಿ ದಾವಣಗೆರೆಯಲ್ಲಿ ರೈಲ್ವೆ ಪೊಲೀಸರ ಸಹಾಯದೊಂದಿಗೆ ಬಂಧಿಸಲಾಗಿದೆ. ಆತನ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿರುವುದರಿಂದ ಆತ ಏನನ್ನೂ ಹೇಳುವ ಸ್ಥಿತಿಯಲ್ಲಿ ಇಲ್ಲ. ಸದ್ಯ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರೈಲಿನಿಂದ ಬಿದ್ದು ಗಾಯಗೊಂಡಿರುವ ಮಾಹಿತಿ ಇದೆ. ಆತ ಯಾಕೆ ಬಿದ್ದ, ಹೇಗೆ ಬಿದ್ದ ಎಂಬುದು ದೃಢವಾಗಬೇಕಾದರೆ, ಆತನೇ ಹೇಳಿಕೆ ಕೊಡಬೇಕಾಗುತ್ತದೆ. ಆಗ ಮಾತ್ರ ನಿಖರ ಕಾರಣ ಗೊತ್ತಾಗುತ್ತದೆ. ಗಾಯಗೊಂಡಿದ್ದ ಆತನನ್ನು ರೈಲ್ವೆ ಪೊಲೀಸರು ದಾವಣಗೆರೆ ಆಸ್ಪತ್ರೆಗೆ ದಾಖಲಿಸಿದ್ದರು. ಬೆಳಗಿನ ಜಾವ 4.30ರ ಸುಮಾರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ'' ಎಂದರು.
''ಬುಧವಾರ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಪತ್ತೆಗಾಗಿ 8 ತಂಡಗಳನ್ನು ನಾವು ರಚನೆ ಮಾಡಿದ್ದೆವು. ಕೊಲೆ ಮಾಡಿದ ಬಳಿಕ ಮಹಾರಾಷ್ಟ್ರ ಅಥವಾ ಗೋವಾದಲ್ಲಿ ತಲೆಮರೆಸಿಕೊಳ್ಳುವ ಯೋಜನೆಯೊಂದಿಗೆ ರೈಲು ಹಾಗೂ ಬಸ್ಗಳಲ್ಲಿ ಓಡಾಡಿರುವುದು ಗೊತ್ತಾಗಿದೆ. ಮೈಸೂರಿನಿಂದ ಗೋವಾ, ಮಹಾರಾಷ್ಟ್ರ ಕಡೆ ತೆರಳಿ ತಲೆಮರೆಸಿಕೊಳ್ಳಬೇಕು ಅಂತ ಪ್ಲಾನ್ ಮಾಡಿಕೊಂಡಿದ್ದ'' ಎಂದು ತಿಳಿಸಿದರು.
''ವಿಶ್ವಮಾನವ ರೈಲು ಹತ್ತಿದ್ದ ಆತ ಬೆಳಗಾವಿಯತ್ತ ತೆರಳುತ್ತಿದ್ದ ಎಂಬ ಮಾಹಿತಿ ಇದೆ. ಅವನೇ ಹೇಳುವ ಪ್ರಕಾರ, ಯುವತಿಯು ಫೋನ್ ನಂಬರ್ ಬ್ಲಾಕ್ ಮಾಡಿದ್ದಳು. ನಾವು ಪ್ರೀತಿ ಮಾಡುತ್ತಿದ್ದೆವು ಎಂದಿದ್ದಾನೆ. ಪ್ರಜ್ಞೆ ಬಂದರ ನಂತರ ಆರೋಪಿಯ ಹೇಳಿಕೆ ಪಡೆದುಕೊಳ್ಳಲಾಗುವುದು. ಈತನ ಮೇಲೆ ನಾಲ್ಕು ಬೈಕ್ ಕಳ್ಳತನ ಪ್ರಕರಣಗಳು ಕೂಡ ಇವೆ'' ಎಂದು ಕಮೀಷನರ್ ರೇಣುಕಾ ಸುಕುಮಾರ್ ಮಾಹಿತಿ ನೀಡಿದರು.
ಇದನ್ನೂ ಓದಿ: ಹುಬ್ಬಳ್ಳಿ: ಪ್ರೀತಿ ನಿರಾಕರಿಸಿದ ಯುವತಿಯ ಮನೆಗೆ ನುಗ್ಗಿ ಹತ್ಯೆ