ಬೆಂಗಳೂರು: ಪಂಚ ಗ್ಯಾರಂಟಿ ಕಾಂಗ್ರೆಸ್ ಸರ್ಕಾರದ ಆದ್ಯತೆಯ ಕಾರ್ಯಕ್ರಮ. ಭಾರೀ ಆರ್ಥಿಕ ಹೊರೆ, ಸೀಮಿತ ಸಂಪನ್ಮೂಲದ ಮಧ್ಯೆ ಗ್ಯಾರಂಟಿಗಳ ಅನುಷ್ಠಾನ ನಡೆಯುತ್ತಿದೆ. ಅಭಿವೃದ್ಧಿಗಳಿಗೆ ಹಣ ಇಲ್ಲ ಎಂದು ಕೈ ಶಾಸಕರ ಪಂಚ ಗ್ಯಾರಂಟಿ ವಿರುದ್ಧದ ಅಪಸ್ವರದ ಮಧ್ಯೆ ಸರ್ಕಾರ ಗ್ಯಾರಂಟಿಗಳನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಹಣ ಪಾವತಿ ವಿಳಂಬ, ಹಣ ಪಾವತಿಯಲ್ಲಿನ ವ್ಯತ್ಯಯಗಳ ಆರೋಪಗಳೊಂದಿಗೆ ಪಂಚ ಗ್ಯಾರಂಟಿ ಜಾರಿಯಾಗುತ್ತಿದೆ. ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ ಡಿಬಿಟಿ, ಯುವನಿಧಿ ಯೋಜನೆ ಮೂಲಕ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕೇಂದ್ರಿತ ಆಡಳಿತ ನಡೆಸುತ್ತಿದೆ. ಸಂಪನ್ಮೂಲ ಹೊಂದಾಣಿಕೆಯೊಂದಿಗೆ ಗ್ಯಾರಂಟಿ ನಿರ್ವಹಣೆಯ ಕಸರತ್ತು ಸಾಗುತ್ತಿದೆ.
ಪಂಚ ಗ್ಯಾರಂಟಿಯನ್ನು ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ಟೀಕಿಸಿದ್ದಾರೆ. ರಾಜ್ಯ ಸರ್ಕಾರ ಸುಳ್ಳು ಆಶ್ವಾಸನೆ ನೀಡಿ ಪಂಚ ಗ್ಯಾರಂಟಿ ಅನುಷ್ಟಾನದಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಶಕ್ತಿ ಯೋಜನೆ ಪರಿಷ್ಕರಣೆ ಹೇಳಿಕೆ, ಬಳಿಕ ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗ್ಯಾರಂಟಿ ಪಾಠ ಪಂಚ ಗ್ಯಾರಂಟಿ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ. 2024-25 ಸಾಲಿನಲ್ಲಿ ಪಂಚ ಗ್ಯಾರಂಟಿಗಾಗಿ ಸರ್ಕಾರ ಒಟ್ಟು 52,000 ಕೋಟಿ ರೂ. ಬಜೆಟ್ ಅನುದಾನ ಹಂಚಿಕೆ ಮಾಡಿದೆ. ಕೆಡಿಪಿ ಪ್ರಗತಿ ಅಂಕಿಅಂಶದ ಪ್ರಕಾರ ಏಪ್ರಿಲ್ನಿಂದ ಅಕ್ಟೋಬರ್ವರೆಗೆ ಒಟ್ಟು 24,407 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಸುಮಾರು 24,014 ಕೋಟಿ ರೂ.ನಷ್ಟು ಪಂಚ ಗ್ಯಾರಂಟಿಗಳಿಗೆ ಹಣ ಖರ್ಚು ಮಾಡಲಾಗಿದೆ. ಅಂದರೆ ಅಷ್ಟೂ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿವೆ.
ಶಕ್ತಿ ಯೋಜನೆಗೆ ಎಷ್ಟು ಹಣ ಬಿಡುಗಡೆ?:ಕೆಡಿಪಿ ಪ್ರಗತಿ ಅಂಕಿಅಂಶದಂತೆ ಶಕ್ತಿ ಯೋಜನೆಗೆ 2024-25 ಸಾಲಿನಲ್ಲಿ ಒಟ್ಟು 5,015 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಈ ಪೈಕಿ ಅಕ್ಟೋಬರ್ವರೆಗೆ 2,925 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಒಟ್ಟು 2,709 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಯೋಜನೆಗೆ 202 ಕೋಟಿ ರೂ. ವೆಚ್ಚವಾಗಿದ್ದರೆ, ಸೆಪ್ಟೆಂಬರ್ನಲ್ಲಿ 417 ಕೋಟಿ ರೂ. ವೆಚ್ಚವಾಗಿದೆ. ಆಗಸ್ಟ್ನಲ್ಲಿ ಯೋಜನೆಗೆ 418 ಕೋಟಿ ರೂ. ಖರ್ಚು ಮಾಡಲಾಗಿದೆ. ಜುಲೈನಲ್ಲಿ 418 ಕೋಟಿ ರೂ. ಹಾಗೂ ಜೂನ್ನಲ್ಲಿ 418 ಕೋಟಿ ರೂ. ವೆಚ್ಚವಾಗಿದೆ. ಮೇ ತಿಂಗಳಲ್ಲಿ ಶಕ್ತಿ ಯೋಜನೆಗಾಗಿ 836 ಕೋಟಿ ರೂ. ವೆಚ್ಚ ಮಾಡಿದ್ದು, ಏಪ್ರಿಲ್ ತಿಂಗಳಲ್ಲಿ ಯಾವುದೇ ಹಣ ಫಲಾನುಭವಿಗಳಿಗೆ ಪಾವತಿ ಮಾಡಿರಲಿಲ್ಲ.
ಗೃಹ ಲಕ್ಷ್ಮಿ ಯೋಜನೆಗೆ ಹಣ ಬಿಡುಗಡೆ:ಗೃಹ ಲಕ್ಷ್ಮಿ ಯೋಜನೆಗೆ ಪ್ರಸಕ್ತ ವರ್ಷದಲ್ಲಿ ಒಟ್ಟು 28,608 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಗೃಹ ಲಕ್ಷ್ಮಿಗೆ ಅಕ್ಟೋಬರ್ವರೆಗೆ 13,572 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಒಟ್ಟು 13,451 ಕೋಟಿ ರೂ. ಹಣ ಖರ್ಚು ಮಾಡಲಾಗಿದೆ. ಅಕ್ಟೋಬರ್ ನಲ್ಲಿ 4, 883 ಕೋಟಿ ರೂ. ವೆಚ್ಚ ಮಾಡಿದ್ದರೆ, ಸೆಪ್ಟೆಂಬರ್ ನಲ್ಲಿ 103 ಕೋಟಿ ರೂ. ಮಾತ್ರ ವೆಚ್ಚವಾಗಿತ್ತು. ಆಗಸ್ಟ್ನಲ್ಲಿ 2,332 ಕೋಟಿ ರೂ. ಖರ್ಚು ಮಾಡಲಾಗಿದೆ. ಜುಲೈನಲ್ಲಿ ಕೇವಲ 31 ಲಕ್ಷ ರೂ. ಮಾತ್ರ ಹಣ ವೆಚ್ಚ ಮಾಡಲಾಗಿದೆ. ಇನ್ನು ಜೂನ್ ಮತ್ತು ಮೇ ತಿಂಗಳಲ್ಲಿ ಯಾವುದೇ ಹಣ ಪಾವತಿಸಿರಲಿಲ್ಲ. ಏಪ್ರಿಲ್ನಲ್ಲಿ 6,133 ಕೋಟಿ ರೂ. ಮೊದಲ ಕಂತು ಬಿಡುಗಡೆ ಮಾಡಲಾಗಿತ್ತು ಎಂದು ಕೆಡಿಪಿ ಪ್ರಗತಿ ಅಂಕಿಅಂಶ ತಿಳಿಸಿದೆ.