ಬಂಟ್ವಾಳ(ದಕ್ಷಿಣ ಕನ್ನಡ):ಜನವರಿ 11ರಂದು ಬಂಟ್ವಾಳ ತಾಲೂಕಿನ ವಗ್ಗ ಸಮೀಪ ಸಾಲುಮರದ ಟ್ರೀಪಾರ್ಕ್ ಮುಂಭಾಗದ ಮನೆಯೊಂದಕ್ಕೆ ಬೆಳಿಗ್ಗೆ ಪ್ರವೇಶಿಸಿದ ನಾಲ್ವರು ಮುಸುಕುಧಾರಿಗಳು, ಮನೆಯಲ್ಲಿದ್ದ ಮಹಿಳೆಯರನ್ನು ಚಾಕುವಿನಿಂದ ಬೆದರಿಸಿ ಬಂಗಾರ, ನಗದುಸಹಿತ ಸುಮಾರು 3 ಲಕ್ಷ ರೂಗೂ ಅಧಿಕ ಮೌಲ್ಯದ ಸೊತ್ತುಗಳನ್ನು ದೋಚಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಕಾರ್ಕಳ ತಾಲೂಕಿನ ಮಾಳ ಗ್ರಾಮದ ಗಣೇಶ ನಾಯ್ಕ (26), ದಿನೇಶ್ ನಾಯ್ಕ (22), ಸಾಗರ ಶೆಟ್ಟಿ (21) ಮಂಗಳೂರು ಐಕಳ ಗ್ರಾಮದ ರಾಕೇಶ್ ಎಲ್.ಪಿಂಟೋ (29), ಕಡಬ ಬೆಳ್ಳಂದೂರು ಗ್ರಾಮದ ಎಂ.ಸೀತಾರಾಮ ಯಾನೆ ಪ್ರವೀಣ್ (36), ಸುಧೀರ್ (29) ಹಾಗು ದರೋಡೆಗೈದ ಚಿನ್ನಾಭರಣ ಸ್ವೀಕರಿಸಿದ್ದ ಬಂಟ್ವಾಳ ತಾಲೂಕಿನ ಇರಾ ಗ್ರಾಮದವನಾದ ಪ್ರಸ್ತುತ ಚಿಕ್ಕಮಗಳೂರಿನ ಗೌರಿ ಕಾಲುವೆಯ ನಿವಾಸಿ ಮಹಮ್ಮದ್ ಹನೀಫ್ (49) ಎಂಬಾತನನ್ನು ಬಂಧಿಸಲಾಗಿದೆ. 3,15,000 ರೂ ಮೌಲ್ಯದ ಚಿನ್ನಾಭರಣ, 8 ಲಕ್ಷ ರೂ ಮೌಲ್ಯದ ಇನ್ನೋವಾ ಕಾರು, 2 ಲಕ್ಷ ರೂ ಮೌಲ್ಯದ ಟಾಟಾ ಇಂಡಿಕಾ ಕಾರು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ.ಬಿ.ರಿಷ್ಯಂತ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಧರ್ಮಪ್ಪ, ರಾಜೇಂದ್ರ, ಮುಂದಾಳತ್ವದಲ್ಲಿ ಡಿವೈಎಸ್ಪಿ ಎಸ್.ವಿಜಯಪ್ರಸಾದ್ ನೇತೃತ್ವದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶಿವಕುಮಾರ ಬಿ, ಪುಂಜಾಲಕಟ್ಟೆ ಎಸ್ಐ ನಂದಕುಮಾರ್, ಗ್ರಾಮಾಂತರ ಎಸ್ಐ ಹರೀಶ ಎಂ.ಆರ್ ನೇತೃತ್ವದಲ್ಲಿ ಮೂರು ವಿಶೇಷ ಪತ್ತೆ ತಂಡಗಳನ್ನು ರಚಿಸಿದ್ದರು.