ಶಿವಮೊಗ್ಗ: ಮಹಾರಾಷ್ಟ್ರದ ಮಹಾಲಕ್ಷ್ಮಿ ಹಾಗೂ ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ತೆರಳಿ ವಾಪಸ್ ಆಗುತ್ತಿದ್ದ 13 ಮಂದಿ ಸಂಬಂಧಿಕರು ಹಾವೇರಿ ಜಿಲ್ಲೆಯಲ್ಲಿ ಇಂದು ನಸುಕಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ನಿಂತಿದ್ದ ಲಾರಿಗೆ ಇವರಿದ್ದ ಟಿಟಿ ವಾಹನ ಡಿಕ್ಕಿಯಾಗಿ ಅವಘಡ ನಡೆದಿದೆ. ಸಾವನ್ನಪ್ಪಿದ ಬಹುತೇಕರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದವರು ಎಂದು ತಿಳಿದುಬಂದಿದೆ.
ಪರಶುರಾಮ್ (45), ಭಾಗ್ಯ (40), ನಾಗೇಶ್ (50), ಆದರ್ಶ್ (ಚಾಲಕ), ವಿಶಾಲಾಕ್ಷಿ (40), ಪುಣ್ಯ (50), ಮಂಜುಳಾಬಾಯಿ (62), ಆದರ್ಶ್ (23) ಟಿಟಿ ಚಾಲಕ, ಮಾನಸ (24), ರೂಪ (40) ಮಂಜುಳಾ (50), ಅಂಜು (28) ಮೃತಪಟ್ಟಿದ್ದಾರೆ.
ಈ ಪೈಕಿ ವಿಶಾಲಾಕ್ಷಮ್ಮ, ಆದರ್ಶ್, ನಾಗೇಶ್, ಭಾಗ್ಯ, ಮಾನಸ, ಸುಭದ್ರತಾಯಿ, ಪರಶುರಾಮ್ ಹಾಗೂ ರೂಪ ಶಿವಮೊಗ್ಗ ನಗರದ ಹಾಲ್ಕೋಳ ನಿವಾಸಿಗಳಾಗಿದ್ದಾರೆ. ಮಂಜುಳಬಾಯಿ, ಭದ್ರಾವತಿ ತಾಲೂಕಿನ ಕಲ್ಯಾಳ್ ಸರ್ಕಲ್ ನಿವಾಸಿ. ಅಂಜು ಎಂಬವರು ಕಡೂರು ತಾಲೂಕಿನ ಬೀರೂರಿನವರು. ಪುಣ್ಯ ಬಾಯಿ ಭದ್ರಾವತಿ ತಾಲೂಕಿನ ಮಾಚೇನಹಳ್ಳಿ ಹಾಲಿನ ಡೈರಿ ಗ್ರಾಮದ ನಿವಾಸಿಯಾಗಿದ್ದಾರೆ.
ಮೃತಪಟ್ಟ ಮಾನಸ ರಾಷ್ಟ್ರೀಯ ಫುಟ್‌ಬಾಲ್ ತಂಡದ ಆಟಗಾರ್ತಿ: ಇದರಲ್ಲಿ ಮಾನಸ ಎಂಬವರು ಅಂಧೆಯಾಗಿದ್ದು, ಭಾರತದ ಫುಟ್‌ಬಾಲ್ ತಂಡದ ಆಟಗಾರ್ತಿಯಾಗಿದ್ದಾರೆ. ಇವರು ಬ್ರೈನ್ ಲಿಪಿಯಲ್ಲಿ ಪದವಿ ಹಾಗು ಎಂಎಸ್ಸಿ ಶಿಕ್ಷಣ ಪಡೆದಿದ್ದರು. ಐಎಎಸ್ ಮಾಡಬೇೆಕೆಂದು ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದರು.
ಮೃತರ ಸಂಬಂಧಿ ಮಹಾಲಕ್ಷ್ಮಿ ಮಾತನಾಡಿದರು (ETV Bharat) ಈ ಬಗ್ಗೆ ಮಾನಸ ಅವರ ಸಹೋದರಿ ಮಹಾಲಕ್ಷ್ಮಿ ಬೇಸರ ವ್ಯಕ್ತಪಡಿಸಿ, ''ನಮ್ಮ ಮನೆಯಿಂದ ಅಪ್ಪ, ಅಮ್ಮ, ತಂಗಿ ಮಾನಸ ದೇವರಿಗೆ ಹೋಗಿದ್ದರು. ಚಿಕ್ಕಪ್ಪ, ದೊಡ್ಡಮ್ಮ, ಅಣ್ಣ, ಅತ್ತಿಗೆ ಎಲ್ಲರೂ ಇದ್ದರು. ನಿನ್ನೆ ಫೋನ್ ಮಾಡಿದ್ದೆ, ಇಂದು ಬೆಳಗಿನ ಜಾವ ಬರುವುದಾಗಿ ಹೇಳಿದ್ದರು. ಇವತ್ತು ನೋಡಿದ್ರೆ ಯಾರೂ ಬಂದಿಲ್ಲ. ನಮ್ಮ ಮನೆ ದೇವರು ಮಹಾರಾಷ್ಟ್ರದ ಲಕ್ಷ್ಮಿ, ಸವದತ್ತಿ ಯಲ್ಲಮ್ಮನ ಗುಡ್ಡ ಹೀಗೆ ಎಲ್ಲೆಡೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದರು. ದೇವರ ದರ್ಶನ ಪಡೆದು ವಾಪಸ್ ಬರುತ್ತಿದ್ದಾಗ ಘಟನೆ ನಡೆದಿದೆ'' ಎಂದು ಹೇಳಿದರು.
''ಮಾನಸಗೆ ಎರಡೂ ಕಣ್ಣು ಕಾಣುತ್ತಿರಲಿಲ್ಲ. ಆಪರೇಷನ್ ಮಾಡಿಸಲಾಗಿತ್ತು. ಅಂತಾರಾಷ್ಟ್ರೀಯ ಫುಟ್‌ಬಾಲ್ ತಂಡದ ನಾಯಕಿಯಾಗಿದ್ದರು. ಐಎಎಸ್‌ಗೆ ಕೋಚಿಂಗ್ ತೆಗೆದುಕೊಳ್ಳುತ್ತಿದ್ದರು. ಛಲ ಬಿಡದೆ ಓದುತ್ತಿದ್ದರು'' ಎಂದು ದುಃಖ ವ್ಯಕ್ತಪಡಿಸಿದರು.
ಇದೇ ಗ್ರಾಮದ ಅರ್ಪಿತ ಕೂಡಾ ವಿಶೇಷಚೇತನರಾಗಿದ್ದು, ಅಪಘಾತದಲ್ಲಿ ಇವರ ಅಜ್ಜಿ, ಅಪ್ಪ, ಅಮ್ಮ, ಅಣ್ಣ ಎಲ್ಲರೂ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಅರ್ಪಿತಾಗೆ ಆಸರೆಯೇ ಇಲ್ಲದಂತಾಗಿದೆ.
ಫುಟ್‌ಬಾಲ್ ಆಟಗಾರ್ತಿ ಮಾನಸ (ETV Bharat) ಅಂತ್ಯಸಂಸ್ಕಾರಕ್ಕೆ ಸಿದ್ಧತೆ: ಶಿವಮೊಗ್ಗದ ಎಮ್ಮೆಹಟ್ಟಿ ಗ್ರಾಮದಲ್ಲಿ 9 ಜನರ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದೆ. ಚಿಕ್ಕಮಗಳೂರಿನ ಕಡೂರು ತಾಲೂಕಿನ ಬೀರೂರು ಗ್ರಾಮದಲ್ಲಿ ಮೂವರು ಹಾಗೂ ಭದ್ರಾವತಿ ತಾಲೂಕಿನ ಹನುಮಾಪುರದಲ್ಲಿ ಒಬ್ಬರ ಅಂತ್ಯಸಂಸ್ಕಾರ ನಡೆಯಲಿದೆ.
ಇದನ್ನೂ ಓದಿ:ಹಾವೇರಿ ಬಳಿ ಘನಘೋರ ರಸ್ತೆ ಅಪಘಾತ: ಮೂರು ಕುಟುಂಬಗಳ 13 ಮಂದಿ ಸಾವು, ಭೀಕರತೆ ಬಿಚ್ಚಿಟ್ಟ ಅಧಿಕಾರಿಗಳು - 13 Died In Haveri Accident