ಮೈಸೂರು:ಸಾಂಸ್ಕೃತಿಕ ನಗರಿ, ಅರಮನೆ ನಗರಿ ಹಾಗೂ ಪ್ರವಾಸಿಗರ ನಗರಿ ಖ್ಯಾತಿಯ ಮೈಸೂರಿಗೆ ಪ್ರತಿ ವರ್ಷ ಲಕ್ಷಾಂತರ ಜನರು ದೇಶ-ವಿದೇಶಗಳಿಂದ ಆಗಮಿಸಿ ಇಲ್ಲಿಯ ಪ್ರವಾಸಿ ತಾಣಗಳನ್ನು ನೋಡಿ ಸಂಭ್ರಮಿಸುತ್ತಾರೆ. ಆದರೆ, ಜಿಲ್ಲೆಗೆ ಕಳೆದ 20 ವರ್ಷಗಳಿಂದ ತಪ್ಪದೇ ಬರುವ ಜೇನು ಹುಳಗಳು ಇಲ್ಲಿಯ ಒಂದೇ ಮರದಲ್ಲಿ 5 ತಿಂಗಳಿಗೂ ಹೆಚ್ಚು ಕಾಲವಿದ್ದು, ಸಂತಾನ ವೃದ್ಧಿಸಿಕೊಂಡು ಹೋಗುವುದನ್ನು ಯಾರಾದರೂ ಗಮನಿಸಿದ್ದೀರಾ?.
ನಗರದ ಪೊಲೀಸ್ ಕಮಿಷನರ್ ಕಚೇರಿಗೆ ತೆರಳುವ ಮಾರ್ಗದಲ್ಲಿ ತೋಟಗಾರಿಕೆ ಇಲಾಖೆ ಇದ್ದು ಇಲ್ಲಿನ ಸಸ್ಯಕ್ಷೇತ್ರದಲ್ಲಿರುವ ದೊಡ್ಡ ಹತ್ತಿ ಮರದಲ್ಲಿ 140ಕ್ಕೂ ಹೆಚ್ಚು ಜೇನು ಗೂಡುಗಳಿವೆ. ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಪ್ರವಾಸ ಬರುವ ಈ ಜೇನು ಹುಳುಗಳು, ಇಲ್ಲಿಯೇ ಗೂಡು ಕಟ್ಟಿ ಮೇ ತಿಂಗಳ ಮಳೆ ಬೀಳುವವರೆಗೂ ಇಲ್ಲೇ ಇರುತ್ತವೆ. ವಂಶಾಭಿವೃದ್ಧಿ ಮಾಡಿಕೊಂಡು ಮತ್ತೆ ಇಲ್ಲಿಂದ ಪ್ರಯಾಣ ಮಾಡುತ್ತವೆ. ಕಳೆದ 20 ವರ್ಷಗಳಿಂದಲೂ ಈ ರೀತಿ ಜೇನುಹುಳು ಒಂದೇ ಮರದಲ್ಲಿ 5 ತಿಂಗಳು ಕಾಲ ವಾಸ್ತವ್ಯ ಮಾಡಿ ವಾಪಸ್ ಹೋಗುವುದು ಅಪರೂಪದಲ್ಲಿ ಅಪರೂಪ ಎನ್ನುತ್ತಾರೆ ಸ್ಥಳೀಯರು.
ತಪ್ಪದೇ ಬರುವ ಪ್ರವಾಸಿಗರು: ದೇಶ-ವಿದೇಶದಿಂದ ಪ್ರತಿ ವರ್ಷ 25 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಮೈಸೂರಿಗೆ ಬಂದು ಹೋಗುತ್ತಾರೆ. ಅದೇ ರೀತಿ ಇಲ್ಲಿಯ ಜೇನು ಹುಳುಗಳು ಸಹ ಪ್ರತಿ ವರ್ಷ ತಪ್ಪದೇ ಬರುತ್ತವೆ. ತಾವು ಕುಟುಂಬಸಹಿತ ಬಂದಿರುವುದಾಗಿ, ಮತ್ತೆ ಇಲ್ಲಿಂದ ಹೋಗುತ್ತಿರುವುದಾಗಿ ಸಾಕ್ಷಿಸಹಿತ ಬಿಟ್ಟು ಹೋಗುತ್ತವೆ. ಇದೊಂದು ವಿಸ್ಮಯ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ನೌಕರ ಜವರೇಗೌಡ.