ಬೆಂಗಳೂರು:ಮಹಿಳೆಯೊಬ್ಬರು ನೀಡಿದ ದೂರಿನ ಮೇಲೆ ಮಾಜಿ ಸಿಎಂ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕಳೆದ ರಾತ್ರಿ 10 ಗಂಟೆಯ ಸುಮಾರಿಗೆ ಮಹಿಳೆಯೊಬ್ಬರು ಬಿಎಸ್ ಯಡಿಯೂರಪ್ಪ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮಾಡುವ ತನಕ ಏನೂ ಹೇಳಲು ಆಗುವುದಿಲ್ಲ. ಕೆಲವರು ಆ ಮಹಿಳೆಗೆ ಮಾನಸಿಕ ಅಸ್ವಸ್ಥತೆ ಇದೆ ಎಂದು ಹೇಳುತ್ತಾರೆ. ಮಹಿಳೆ ದೂರನ್ನು ಟೈಪ್ ಮಾಡಿ ಕೊಟ್ಟಿದ್ದಾರೆ. ಕೈಯ್ಯಲ್ಲಿ ಬರೆದು ಕೊಟ್ಟಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತನಿಖೆ ಬಗ್ಗೆ ಈಗಲೇ ಏನು ಹೇಳಲು ಆಗುವುದಿಲ್ಲ. ಇದು ಮಾಜಿ ಸಿಎಂಗೆ ಸಂಬಂಧಿಸಿದ ವಿಚಾರ. ಅತಿ ಸೂಕ್ಷ್ಮ ವಿಚಾರ. ಹಾಗಾಗಿ ಬಹಳ ಎಚ್ಚರಿಕೆಯಿಂದ ಮಾತನಾಡಬೇಕಾಗುತ್ತೆ. ತನಿಖೆ ಆಗುವವರೆಗೆ ಏನನ್ನೂ ಬಹಿರಂಗ ಪಡಿಸಲು ಆಗುವುದಿಲ್ಲ ಎಂದು ತಿಳಿಸಿದರು.
ಮಹಿಳೆಗೆ ರಕ್ಷಣೆ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದರ ಅಗತ್ಯ ಬಿದ್ದರೆ ಪೊಲೀಸರು ರಕ್ಷಣೆ ಮಾಡ್ತಾರೆ. ದೂರು ಕೊಟ್ಟ ಮಹಿಳೆಗೆ ಯಾರಾದರು ತೊಂದರೆ ಕೊಡುವ ಕೆಲಸ ಮಾಡಿದರೆ ಪೊಲೀಸರು ಸಹಜವಾಗಿ ರಕ್ಷಣೆ ಕೊಡುತ್ತಾರೆ ಎಂದರು.