ಬೆಂಗಳೂರು:''ಲೋಕಸಭೆ ಚುನಾವಣೆಯಲ್ಲಿ ನನ್ನನ್ನೂ ಸೇರಿಸಿ ಯಾವೆಲ್ಲಾ ಜಿಲ್ಲೆಗಳಲ್ಲಿ ಹಿನ್ನಡೆಯಾಗಿದೆ ಅಂತ ವಿಶ್ಲೇಷಣೆ ಮಾಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ'' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿ ಮಾತನಾಡಿದ ಅವರು, ''ನಿನ್ನೆ ನಡೆದ ರಾಹುಲ್ ಗಾಂಧಿ ಸಭೆಯಲ್ಲಿ ಸಚಿವರಿಗೆ ತರಾಟೆ ವಿಚಾರವಾಗಿ ಪ್ರತಿಕ್ರಿಯಿಸಿ, ಸ್ವಾಭಾವಿಕವಾಗಿ ಚರ್ಚೆ ಮಾಡಬೇಕು. ಯಾಕೆ ಹೀಗಾಗಿದೆ ಅಂತ ವಿಶ್ಲೇಷಣೆ ಮಾಡಬೇಕು. ನನ್ನನ್ನೂ ಸೇರಿಸಿ ಯಾವೆಲ್ಲಾ ಜಿಲ್ಲೆಗಳಲ್ಲಿ ಹಿನ್ನಡೆಯಾಗಿದೆ ಅಂತ ವಿಶ್ಲೇಷಣೆ ಮಾಡಿ ಅಂತ ಹೇಳಿದ್ದಾರೆ. ಅವರೇ ಸೂಚನೆ ಕೊಟ್ಟಿದ್ದಾರೆ. ನಾವು ಅವರು ಕೊಟ್ಟ ಸೂಚನೆಗೆ ಬದ್ಧರಾಗಿದ್ದೇವೆ. ಹಾಗೆಯೇ ನಡೆದುಕೊಳ್ಳುತ್ತೇವೆ'' ಎಂದರು.
ವಾಲ್ಮೀಕಿ ನಿಗಮದಲ್ಲಿ ಆಗಿರುವ ಭ್ರಷ್ಟಾಚಾರದಲ್ಲಿ ಸಚಿವ ಶರಣ ಪ್ರಕಾಶ್ ಪಾಟೀಲ್ ಹೆಸರು ತಳುಕು ಹಾಕಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ''ತನಿಖೆ ನಡೆಯುತ್ತಿರುವಾಗ ಅನೇಕ ವಿಚಾರ ಬರುತ್ತವೆ. ಅಪರಾಧಿ ಸ್ಥಾನದಲ್ಲಿ ಇರುವವರು ತನಿಖೆ ವೇಳೆ ಹಲವು ಹೇಳಿಕೆಗಳನ್ನು ಕೊಡುತ್ತಾರೆ. ಆ ಹೇಳಿಕೆಯಲ್ಲಿ ಹಲವರ ಹೆಸರು ಬರುತ್ತದೆ. ಅದನ್ನು ಎಸ್ಐಟಿ ಅವರು ತನಿಖೆ ಹಾಗೂ ವಿಚಾರಣೆ ಮಾಡುತ್ತಾರೆ. ನಾವು ಅದರ ಬಗ್ಗೆ ವ್ಯಾಖ್ಯಾನ ಮಾಡುವುದು ಸರಿಯಲ್ಲ. ಅದಕ್ಕೆ ಸಂಬಂಧಪಟ್ಟ ಹೇಳಿಕೆ ಕೊಡಲು ಆಗಲ್ಲ'' ಎಂದರು.
ಶರಣ ಪ್ರಕಾಶ್ ಪಾಟೀಲ್ ರಾಜೀನಾಮೆ ನೀಡುವಂತೆ ಬಿಜೆಪಿ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸುತ್ತ, ''ಯಾರು ಏನೇ ಹೇಳಿದರೂ, ಅದನ್ನು ಪರಿಶೀಲನೆ ಮಾಡಬೇಕಾಗುತ್ತದೆ. ಅಗತ್ಯ ಇದ್ದರೆ ಎಸ್ಐಟಿ ತಂಡವವರು ವಿಚಾರಣೆ ಮಾಡುತ್ತಾರೆ'' ಎಂದು ತಿಳಿಸಿದರು.
ಇದನ್ನೂ ಓದಿ:ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅವ್ಯವಹಾರ ಪ್ರಕರಣ ಸಿಬಿಐಗೆ ವಹಿಸಿ: ವಿಜಯೇಂದ್ರ ಆಗ್ರಹ - BY Vijayendra