ಕರ್ನಾಟಕ

karnataka

ETV Bharat / state

ದತ್ತಾತ್ರೇಯ ಪೀಠ ಬಾಬಾಬುಡನ್ ಗಿರಿ ದರ್ಗಾ ಸಮಸ್ಯೆ ಶಾಶ್ವತವಾಗಿ ಬಗೆಹರಿಸಲು ಸರ್ಕಾರದ ಚಿಂತನೆ - HOME MINISTER PARAMESHWARA

ನಮ್ಮ ಸರ್ಕಾರವು ದತ್ತಾತ್ರೇಯ ಬಾಬಾ ಬುಡನ್‌ಗಿರಿ ದರ್ಗಾ ಗೊಂದಲವನ್ನು ಶಾಶ್ವತವಾಗಿ ಬಗೆಹರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

PARAMESHWARA MEETING ON DATTA PEETA
ದತ್ತಾತ್ರೇಯ ಬಾಬಾ ಬುಡನ್‌ಗಿರಿ ದರ್ಗಾ ಗೊಂದಲದ ಕುರಿತು ಚಿಕ್ಕಮಗಳೂರಿನ ಮುಖಂಡರೊಂದಿಗೆ ಸಭೆ ನಡೆಸಿದ ಗೃಹ ಸಚಿವರು (ETV Bharat)

By ETV Bharat Karnataka Team

Published : Jan 17, 2025, 2:47 PM IST

ಬೆಂಗಳೂರು : ಚಿಕ್ಕಮಗಳೂರು ಇನಾಂ ದತ್ತಾತ್ರೇಯ ಪೀಠ ಬಾಬಾ ಬುಡನ್‌ಗಿರಿ ದರ್ಗಾ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಎಸ್‌ಎಲ್‌ಪಿ ಕುರಿತು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಚಿಕ್ಕಮಗಳೂರು ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಧಾರ್ಮಿಕ ಮುಖಂಡರುಗಳೊಂದಿಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಸಮಾಲೋಚನೆ ಸಭೆ ನಡೆಸಿದರು.

ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರುಗಳ ಸಲಹೆಗಳನ್ನು ಪಡೆದರು. ದಾಖಲೆಗಳು ಶಾಶ್ವತವಾಗಿ ಇರುವಂತಹವು.‌ ಈ ವಿಚಾರದಲ್ಲಿ ಕಾನೂನಿನ ಸಲಹೆ ಪಡೆಯಬೇಕಾಗುತ್ತದೆ. ಕರ್ನಾಟಕಕ್ಕೆ ದೇಶದಲ್ಲಿ ಒಳ್ಳೆಯ ಹೆಸರಿದೆ. ಈ ಸಮಸ್ಯೆಯನ್ನು ಹೆಚ್ಚು ದಿನ ಮುಂದಕ್ಕೆ ತೆಗೆದುಕೊಂಡು ಹೋಗುವುದಿಲ್ಲ. ಶಾಂತಿ ಸಾಮರಸ್ಯ ನೆಲೆಸುವಂತೆ‌ ಮಾಡಬೇಕು. ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು ಎಂದು ಸರ್ಕಾರ ತೀರ್ಮಾನ ಮಾಡಿದೆ ಎಂದು ಸಭೆಯಲ್ಲಿ ತಿಳಿಸಿದರು.

ದತ್ತಾತ್ರೇಯ ಬಾಬಾ ಬುಡನ್‌ಗಿರಿ ದರ್ಗಾ ಗೊಂದಲದ ಕುರಿತು ಚಿಕ್ಕಮಗಳೂರಿನ ಮುಖಂಡರೊಂದಿಗೆ ಸಭೆ ನಡೆಸಿದ ಗೃಹ ಸಚಿವರು (ETV Bharat)

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಚಂದ್ರದೋಣ ಪರ್ವತದಲ್ಲಿರುವ ದತ್ತಾತ್ರೇಯ ಬಾಬಾ ಬುಡನ್‌ಗಿರಿ ದರ್ಗಾ ಕರ್ನಾಟಕದಲ್ಲಿ ಭಾವೈಕ್ಯತೆ ತೋರಿಸುವ ಸ್ಥಳ. 1975ರವರೆಗೆ ಒಂದು ರೀತಿಯ ಕಾರ್ಯಕ್ರಮಗಳು ನಡೆದರೆ, ತದನಂತರದ ದಿನಗಳಲ್ಲಿ ಅನೇಕ ಗೊಂದಲಗಳನ್ನು ಕಂಡಿದ್ದೇವೆ ಎಂದರು.

ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಪ್ರಯತ್ನಗಳನ್ನು ಮಾಡಿದೆ. ಹಿಂದೂ, ಮುಸ್ಲಿಂ ಸಮುದಾಯದವರು ಕೋರ್ಟ್ ಮೊರೆ ಹೋಗಿರುವುದನ್ನು ನೋಡಿದ್ದೇವೆ. ಸಮಿತಿ, ಸಚಿವ ಸಂಪುಟ ಉಪ ಸಮಿತಿಗಳನ್ನು ರಚಿಸಿ ದಾಖಲೆಗಳನ್ನು ಪರಿಶೀಲಿಸಿ ಕೋರ್ಟ್‌ಗೆ ತಿಳಿಸಲಾಗಿದ್ದು, ತೀರ್ಪುಗಳು ಬಂದಿವೆ. ಕೆಲವರು ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ತಿಳಿಸಿದರು‌.

ದತ್ತಾತ್ರೇಯ ಬಾಬಾ ಬುಡನ್‌ಗಿರಿ ದರ್ಗಾ ಗೊಂದಲದ ಕುರಿತು ಚಿಕ್ಕಮಗಳೂರಿನ ಮುಖಂಡರೊಂದಿಗೆ ಸಭೆ ನಡೆಸಿದ ಗೃಹ ಸಚಿವರು (ETV Bharat)

ಗೊಂದಲ ಬಗೆಹರಿಸಲು ಸಚಿವ ಸಂಪುಟ ಉಪ ಸಮಿತಿ:ನಮ್ಮ ಸರ್ಕಾರವು ದತ್ತಾತ್ರೇಯ ಬಾಬಾ ಬುಡನ್‌ಗಿರಿ ದರ್ಗಾ ಗೊಂದಲ ಬಗೆಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಉಪ ಸಮಿತಿ ರಚಿಸಿದ್ದಾರೆ. ಈವರೆಗೆ ನಾಲ್ಕು ಸಭೆಗಳನ್ನು ನಡೆಸಿ, ಅನೇಕ ದಾಖಲೆಗಳನ್ನು ಪರಿಶೀಲಿಸಿ ದಾವೆಗೆ ಬೇಕಾದ ಮಾಹಿತಿಗಳನ್ನು ಕೋರ್ಟ್‌ಗೆ ನೀಡಲಾಗಿದೆ. ಮಾರ್ಚ್ 24ರೊಳಗೆ ಸರ್ಕಾರದ ಅಭಿಪ್ರಾಯ ತಿಳಿಸುವಂತೆ ಜನವರಿ 7ರಂದು ಸುಪ್ರೀಂಕೋರ್ಟ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ, ಎಲ್ಲರ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆದುಕೊಳ್ಳಲಾಗಿದೆ. ಮುಂದಿನ ವಾರ ಸಚಿವ ಸಂಪುಟ ಉಪ‌ಸಮಿತಿ ಸಭೆ ಕರೆದು ಜನಪ್ರತಿನಿಧಿಗಳು ಹಾಗೂ ಧಾರ್ಮಿಕ ಮುಖಂಡರು ತಿಳಿಸಿರುವ ಸಲಹೆಗಳನ್ನು ಮತ್ತು ದಾಖಲೆಗಳನ್ನು ಪರಿಶೀಲಿಸಿ ಕೋರ್ಟ್‌ಗೆ ತಿಳಿಸುತ್ತೇವೆ. ಅದಾದ ನಂತರ ಕೋರ್ಟ್‌ನಿಂದ ಬರುವ ತೀರ್ಮಾನದಂತೆ ನಡೆದುಕೊಳ್ಳೋಣ ಎಂದು ಹೇಳಿದರು.

ದತ್ತಾತ್ರೇಯ ಬಾಬಾ ಬುಡನ್‌ಗಿರಿ ದರ್ಗಾ ಗೊಂದಲದ ಕುರಿತು ಚಿಕ್ಕಮಗಳೂರಿನ ಮುಖಂಡರೊಂದಿಗೆ ಸಭೆ ನಡೆಸಿದ ಗೃಹ ಸಚಿವರು (ETV Bharat)

ಈ ಸಂದರ್ಭದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಇಂಧನ ಸಚಿವ ಕೆ.ಜೆ.ಜಾರ್ಜ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್, ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ಶಾಸಕರಾದ ಹೆಚ್.ಡಿ.ತಮ್ಮಯ್ಯ, ನಯನಾ ಮೋಟಮ್ಮ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ಧಾರ್ಮಿಕ ಮುಖಂಡರು, ಚಿಕ್ಕಮಗಳೂರು ಜಿಲ್ಲೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಕೋಮು ಸಾಮರಸ್ಯ ಸಾರುವ ಶಿಶುನಾಳ: ಇಲ್ಲಿ ಹಿಂದೂ - ಮುಸ್ಲಿಮರಿಂದ ನಡೆಯುತ್ತೆ ಷರೀಫ್​ - ಗೋವಿಂದ ಭಟ್ಟರ ಮೂರ್ತಿಗಳಿಗೆ ಪೂಜೆ - COMMUNAL HARMONY IN SHISHUNALA

ABOUT THE AUTHOR

...view details