ಕರ್ನಾಟಕ

karnataka

ETV Bharat / state

ಪಾಕ್​ ಪರ ಘೋಷಣೆ ಕೂಗಿ ಅವಮಾನಿಸಿದ್ದರೆ ಕಠಿಣ ಕ್ರಮ: ಗೃಹ ಸಚಿವ ಪರಮೇಶ್ವರ್ - ಪಾಕಿಸ್ತಾನ ಪರ ಘೋಷಣೆ ಆರೋಪ

ವಿಧಾನಸೌಧದಲ್ಲಿ ಪಾಕ್​ ಪರ ಘೋಷಣೆ ಕೂಗಿದ್ದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

Eಪಾಕ್​ ಪರ ಘೋಷಣೆ ಕೂಗಿ ಅವಮಾನ ಮಾಡಿದ್ದರೆ ಕಠಿಣ ಕ್ರಮ: ಗೃಹ ಸಚಿವ ಪರಮೇಶ್ವರ್
ಪಾಕ್​ ಪರ ಘೋಷಣೆ ಕೂಗಿ ಅವಮಾನ ಮಾಡಿದ್ದರೆ ಕಠಿಣ ಕ್ರಮ: ಗೃಹ ಸಚಿವ ಪರಮೇಶ್ವರ್

By ETV Bharat Karnataka Team

Published : Feb 28, 2024, 4:56 PM IST

ಬೆಂಗಳೂರು: ರಾಜ್ಯದಲ್ಲಿ ಎಲ್ಲೇ ಆದರೂ ಸರಿ, ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿ ನಮಗೆ ಅವಮಾನ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಗೆ ಭರವಸೆ ನೀಡಿದರು.

ಗೃಹಸಚಿವರ ಉತ್ತರದಿಂದ ಸಮಾಧಾನಗೊಳ್ಳದ ಪ್ರತಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ರಾಜ್ಯಸಭೆಗೆ ಆಯ್ಕೆಯಾದ ಸೈಯದ್ ನಾಸಿರ್ ಹುಸೇನ್ ಅವರನ್ನು ಬಂಧಿಸಬೇಕೆಂದು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಪಟ್ಟುಹಿಡಿದು ಧರಣಿ ನಡೆಸಿದ್ದರಿಂದ ಸ್ಪೀಕರ್ ಯು.ಟಿ.ಖಾದರ್ ಸದನವನ್ನು ನಾಳೆಗೆ ಮುಂದೂಡಿದರು.

ಇದಕ್ಕೂ ಮುನ್ನ ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ನಿನ್ನೆ ಸಂಭ್ರಮಾಚರಣೆ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಬಿಜೆಪಿಯ ಹಲವು ಶಾಸಕರು ನಡೆಸಿದ ಚರ್ಚೆಗೆ ಉತ್ತರ ನೀಡಿದ ಗೃಹ ಸಚಿವ ಪರಮೇಶ್ವರ್, ಸಂಭ್ರಮಾಚರಣೆ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಘಟನೆ ಒಂದೇ ಅಲ್ಲ, ರಾಜ್ಯದಲ್ಲಿ ಎಲ್ಲೇ ಆದರೂ, ಪಾಕಿಸ್ತಾನ ಪರ ಯಾರೇ ಘೋಷಣೆ ಕೂಗಿದರು ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಸದನಕ್ಕೆ ಭರವಸೆ ನೀಡಿದರು.

ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಜಯ್ ಮಾಕೇನ್, ಸಯ್ಯದ್ ನಾಸೀರ್ ಹುಸೇನ್, ಜಿ.ಸಿ.ಚಂದ್ರಶೇಖರ್, ನಾರಾಯಣ ಸಾ ಭಾಂಡಗೆ ಚುನಾಯಿತರಾಗಿದ್ದಾರೆ. ಆ ಸಂದರ್ಭದಲ್ಲಿ ಅವರ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಸಂಭ್ರಮಾಚರಣೆಗಾಗಿ ಅವರನ್ನು ಒಳಗೆ ಬಿಡಬಾರದಿತ್ತು. ಬಿಟ್ಟಿದ್ದು ತಪ್ಪು ಎಂದರು. ಸಯ್ಯದ್ ನಾಸಿರ್ ಹುಸೇನ್ ಅವರು ವಿಧಾನಸೌಧಕ್ಕೆ ಬರಲು 25 ಜನರಿಗೆ ಅನುಮತಿ ಪಡೆದಿದ್ದರು. ಸಂಭ್ರಮಾಚರಣೆ ಸಂದರ್ಭದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿರುವ ಬಗ್ಗೆ ಆರೋಪ ಮಾಡಲಾಗಿದೆ. ಆದರೆ, ಆ ಬಗ್ಗೆ ಸತ್ಯಸತ್ಯತೆಯನ್ನು ವೈಜ್ಞಾನಿಕವಾಗಿ ತಿಳಿಯಲು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಕೇಳಲಾಗಿದೆ. ವರದಿ ಬಂದ ತಕ್ಷಣ ಒಂದು ಕ್ಷಣವೂ ತಡ ಮಾಡದೆ ಕಾನೂನು ರೀತಿ ಕ್ರಮ ಜರುಗಿಸುತ್ತೇವೆ, ಯಾರನ್ನೂ ಸಹ ರಕ್ಷಣೆ ಮಾಡುವುದಿಲ್ಲ ಎಂದು ಹೇಳಿದರು.

ನಿನ್ನೆ ಸಂಜೆ ಆರೋಪ ಕೇಳಿಬಂದ ಕೂಡಲೇ ಸ್ವಯಂ ದೂರು ದಾಖಲಿಸಲಾಗಿದೆ. ಬಿಜೆಪಿಯವರು ಈ ಸಂಬಂಧ ನೀಡಿರುವ ದೂರನ್ನೂ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದರು. ಬಹಳ ಗಂಭೀರವಾದ ವಿಚಾರ ಸದನದಲ್ಲಿ ಚರ್ಚೆಯಾಗಿದೆ. ಅನಿವಾಸಿ ಭಾರತೀಯರು ಸದನದ ಕಾರ್ಯ ಕಲಾಪಗಳನ್ನು ವೀಕ್ಷಣೆ ಮಾಡಿದ್ದರು. ಅದಕ್ಕೆ ಸ್ಪೀಕರ್ ಅವಕಾಶ ಮಾಡಿಕೊಟ್ಟಿದ್ದರು. ಅದಕ್ಕೆ ಅಭಿನಂದನೆ ಸಲ್ಲಿಸಲಾಗಿತ್ತು. ಬೇರೆ ಬೇರೆ ರಾಷ್ಟ್ರಗಳಿಂದಲೂ ಕರೆ ಮಾಡಿದ್ದಾರೆ. ನಾವು ಯಾವ ರೀತಿ ಚರ್ಚೆ ಮಾಡುತ್ತಿದ್ದೇವೆ ಎಂಬುದನ್ನು ವಿದೇಶದಲ್ಲಿರುವ ನಮ್ಮವರು ಗಮನಿಸುತ್ತಾರೆ ಎಂದು ಹೇಳಿದರು.
ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿದೆ ಎಂಬ ಆರೋಪದ ವಿಚಾರದಲ್ಲಿ ರಾಜಕೀಯದ ಕಡೆ ಹೋಗುತ್ತಿದ್ದೇವೆ ಎನ್ನಿಸುತ್ತಿದೆ.

ರಾಜಕೀಯ ಕಾರಣಕ್ಕಾಗಿ ಗಂಭೀರ ವಿಚಾರ ಬಳಕೆ ಮಾಡಬಾರದು. ನೈಜ ಪರಿಸ್ಥಿತಿ ಆಧರಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರು ಚರ್ಚಿಸಿದರೆ ಮುಂದೆ ಇಂತಹ ಘಟನೆ ಮರುಕಳುಹಿಸದಂತೆ ತಡೆಯಬಹುದು ಎಂದರು.

ದೇಶ ಪ್ರೇಮದ ಪಾಠ ಹೇಳಬೇಕೆ?:ಕಾಂಗ್ರೆಸ್‍ಗೆ ದೇಶ ಪ್ರೇಮದ ಪಾಠ ಹೇಳಬೇಕೆ? ದೇಶ ಸ್ವಾತಂತ್ರ್ಯಗಳಿಸಲು ಎಷ್ಟು ಜನರ ತ್ಯಾಗ ಬಲಿದಾನವಾಗಿದೆ. ಇಂದಿಗೂ ದೇಶ ಪ್ರೇಮದ ಬದ್ದತೆ, ಧ್ಯೇಯ ಬದಲಾಗಿಲ್ಲ. ಕಾಂಗ್ರೆಸ್‍ನವರಿಗೆ ದೇಶಪ್ರೇಮ ರಕ್ತಗತವಾಗಿದೆ. ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದವರಿಗೆ ಬೆಂಬಲ ನೀಡುವುದಿಲ್ಲ. 1972ರಲ್ಲಿ ಪಾಕಿಸ್ತಾನವನ್ನು ವಶಕ್ಕೆ ಪಡೆಯುವುದರ ಮಟ್ಟಿಗೆ ಯುದ್ದ ಮಾಡಿದ್ದೇವೆ. ಆದರೆ ಪ್ರಧಾನಿಯವರು ಪೂರ್ವನಿಗದಿತ ಕಾರ್ಯಕ್ರಮವಿಲ್ಲದೆ ಪಾಕಿಸ್ತಾನಕ್ಕೆ ಹೋಗುತ್ತಾರೆ. ನೆರೆಹೊರೆ ರಾಷ್ಟ್ರಗಳೊಂದಿಗೆ ಸಂಬಂಧ ಇಟ್ಟುಕೊಳ್ಳುವುದು ತಪ್ಪೆಂದು ಭಾವಿಸುವುದಿಲ್ಲ ಎಂದರು.

ಅನೇಕ ಘಟನೆ, ವಿಚಾರಗಳ ಬಗ್ಗೆ ಚರ್ಚಿಸಬಹುದು. ಈಗ ಅದು ಅಪ್ರಸ್ತುತ. ಬಜೆಟ್‍ನಲ್ಲಿ ರಾಜ್ಯ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚಿಸಬಹುದಲ್ಲವೇ ಎಂದ ಅವರು, ನಿನ್ನೆ ಸಂಜೆ ಆ ಘಟನೆ ಆಗಬಾರದಿತ್ತು ನಡೆದಿದೆ. ಮಾಧ್ಯಮಗಳಲ್ಲಿ ಎರಡು ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ. ಆ ರೀತಿ ಘೋಷಣೆ ಕೂಗಿದ್ದಾರೆ ಎಂದು ಕೆಲವರು ಅಭಿಪ್ರಾಯಿಸಿದರೆ, ಮತ್ತೆ ಕೆಲವರು ಆ ರೀತಿ ಘೋಷಣೆ ಕೂಗಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದರು. ಆಗ ಬಿಜೆಪಿ ಸದಸ್ಯ ಟಿ.ಸುನೀಲ್‍ ಕುಮಾರ್ ಮಾತನಾಡಿ, ಎಫ್​ಎಸ್​ಎಲ್ ವರದಿ ಬರುವವರೆಗೂ ಯಾರನ್ನೂ ವಿಚಾರಣೆಗೊಳಪಡಿಸುವುದಿಲ್ಲವೇ? ವರದಿ ಬರಲು ವಾರ, ತಿಂಗಳು ಆಗಬಹುದು. ಅಲ್ಲಿಯವರೆಗೂ ನೀವು ಸುಮ್ಮನಿದ್ದರೆ ಹೇಗೆ ಎಂದು ಪ್ರಶ್ನಿಸಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಧರಣಿ ನಡೆಸಿದರು.

ವಿಧಾನಸಭೆ ಅಧಿವೇಶನದ ಕಾರ್ಯಕಲಾಪ ಒಂದು ದಿನ ವಿಸ್ತರಣೆ:ವಿಧಾನಸಭೆ ಅಧಿವೇಶನದ ಕಾರ್ಯಕಲಾಪ ಮತ್ತೆ ಒಂದು ದಿನ (ನಾಳೆಗೆ) ವಿಸ್ತರಣೆ ಮಾಡಲಾಗಿದೆ. ಫೆಬ್ರವರಿ 23ರ ಶುಕ್ರವಾರದಂದು ಮುಗಿಯಬೇಕಿದ್ದ ಅಧಿವೇಶನವನ್ನು ಒಂದು ದಿನ ವಿಸ್ತರಣೆ ಮಾಡಿ ಸೋಮವಾರಕ್ಕೆ ಮುಂದೂಡಲಾಗಿತ್ತು. ಆದರೆ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯ್ಕ ಅವರ ನಿಧನ ಹೊಂದಿದ ಹಿನ್ನೆಲೆಯಲ್ಲಿ ಸೋಮವಾರ ವಿಧಾನಸಭೆಯಲ್ಲಿ ಸಂತಾಪ ಸೂಚನೆ ಸಲ್ಲಿಸಿ ಯಾವುದೇ ಕಾರ್ಯಕಲಾಪಗಳನ್ನು ನಡೆಸದೆ ಅಧಿವೇಶನವನ್ನು ಬುಧವಾರಕ್ಕೆ ಮುಂದೂಡಲಾಯಿತು.

ಇಂದು ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿಗಳು ಉತ್ತರ ನೀಡಬೇಕಿತ್ತು. ಆದರೆ, ರಾಜ್ಯಸಭೆಯಲ್ಲಿ ಗೆದ್ದ ಸೈಯದ್ ನಾಸೀರ್ ಹುಸೇನ್ ಅವರ ವಿಜಯೋತ್ಸವ ಆಚರಣೆ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪ ಹಾಗೂ ಚರ್ಚೆ, ಅರ್ಧ ದಿನ ಕಲಾಪವನ್ನು ಬಲಿ ತೆಗೆದುಕೊಂಡಿತು. ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಸದಸ್ಯರು ನಡೆಸಿದ ಧರಣಿಯಿಂದಾಗಿ ಸಿಎಂ ಉತ್ತರ ಕೊಡಲು ಸಾಧ್ಯವಾಗಲಿಲ್ಲ. ಹಾಗಾಗಿ, ಸ್ಪೀಕರ್ ಯು.ಟಿ.ಖಾದರ್ ಸದನವನ್ನು ನಾಳೆಗೆ ಮುಂದೂಡಿದರು.

ಇದನ್ನೂ ಓದಿ:ಪಾಕಿಸ್ತಾನ ಪರ ಇರುವವರನ್ನು ಬೈದರೆ ತಪ್ಪಲ್ಲ: ಸ್ಪೀಕರ್ ಖಾದರ್

ABOUT THE AUTHOR

...view details