ಕರ್ನಾಟಕ

karnataka

ETV Bharat / state

ಮುಖ್ಯಮಂತ್ರಿ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆಯುತ್ತಿಲ್ಲ: ಪರಮೇಶ್ವರ್ - CM Change Issue

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಬದಲಾವಣೆಯ ಕುರಿತು ಮಾತನಾಡಿದ್ದಾರೆ. ಮುಖ್ಯಮಂತ್ರಿ ಬದಲಾವಣೆಯ ಸಂದರ್ಭ ಬಂದರೆ ಯಾರಿಗೆ ಅವಕಾಶ ನೀಡಬೇಕು ಎಂಬಂತಹ ಚರ್ಚೆಗಳಾಗುತ್ತವೆ. ಸದ್ಯಕ್ಕೆ ಎಲ್ಲಿಯೂ ಕೂಡಾ ಅಂತಹ ವಿಚಾರಗಳಿಲ್ಲ ಎಂದರು.

home-minister-dr-g-parameshwar
ಗೃಹ ಸಚಿವ ಡಾ.ಜಿ.ಪರಮೇಶ್ವರ್ (ETV Bharat)

By ETV Bharat Karnataka Team

Published : Aug 21, 2024, 4:28 PM IST

Updated : Aug 21, 2024, 5:54 PM IST

ಗೃಹ ಸಚಿವ ಡಾ. ಜಿ ಪರಮೇಶ್ವರ್ (ETV Bharat)

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಕುರಿತು ಯಾವುದೇ ಚರ್ಚೆಗಳು ನಡೆಯುತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಬದಲಾವಣೆಯ ಸಂದರ್ಭ ಬಂದರೆ ಯಾರಿಗೆ ಅವಕಾಶ ಎಂಬ ಚರ್ಚೆಗಳಾಗುತ್ತವೆ. ಆದರೆ ಸದ್ಯಕ್ಕೆ ಎಲ್ಲಿಯೂ ಅಂತಹ ಚರ್ಚೆಗಳು ನಡೆಯುತ್ತಿಲ್ಲ ಎಂದು ಸ್ಫಷ್ಟಪಡಿಸಿದರು.

ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ದೆಹಲಿಗೆ ಭೇಟಿ ನೀಡಿ ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್‌ಗೆ ಮಾಹಿತಿ ನೀಡಲಿದ್ದಾರೆ. ಅದನ್ನು ಹೊರತುಪಡಿಸಿದರೆ ವಿಶೇಷವೇನೂ ಇಲ್ಲ ಎಂದರು.

ಬಿಜೆಪಿ ಅಧಿಕಾರವಧಿಯಲ್ಲಿನ ಹಲವು ಹಗರಣಗಳು ತನಿಖಾ ಹಂತದಲ್ಲಿವೆ. ಕೆಲವು ಪ್ರಕರಣಗಳ ತಾರ್ಕಿಕ ಅಂತ್ಯವಾಗಲಿದೆ. ಇಲ್ಲಿ ಹೊಂದಾಣಿಕೆ ರಾಜಕಾರಣ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕೋವಿಡ್‌ ಕಾಲದಲ್ಲಿ ನಡೆದ ಹಗರಣಗಳ ಬಗ್ಗೆ ತನಿಖೆ ಕುರಿತ ವರದಿ ಈ ತಿಂಗಳ ಅಂತ್ಯಕ್ಕೆ ಸರ್ಕಾರಕ್ಕೆ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಅದರಲ್ಲಿ ಯಾವ ಅಂಶಗಳಿವೆ ಎಂಬುದು ನಮಗೆ ಗೊತ್ತಿಲ್ಲ. ವರದಿ ಬಂದ ಬಳಿಕ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯಪಾಲರನ್ನು ಜಾತಿ ಆಧಾರದ ಮೇಲೆ ನೇಮಕ ಮಾಡುವುದಿಲ್ಲ. ಹೀಗಾಗಿ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ಪ್ರಕರಣದಲ್ಲಿ ರಾಜ್ಯಪಾಲರ ವಿರುದ್ಧ ಆರೋಪಗಳಿಗೆ ಜಾತಿ ರಾಜಕಾರಣ ಬೆರೆಸುವುದು ಸರಿಯಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವಂತೆ ವೈಯಕ್ತಿಕವಾಗಿ ಮನವಿ ಸಲ್ಲಿಸಿದ್ದ ಟಿ.ಜೆ.ಅಬ್ರಹಾಂ ಅವರ ಅರ್ಜಿಯನ್ನು ರಾಜ್ಯಪಾಲರು ಪರಿಗಣಿಸುವುದಾದರೆ, ಕುಮಾರಸ್ವಾಮಿ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆಗೆ ಏಕೆ ಅನುಮತಿ ನೀಡುವುದಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಹೇಳಿದರು.

ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಗೆ 550 ಎಕರೆ ಜಮೀನನ್ನು ಮಂಜೂರು ಮಾಡಿದ್ದಾರೆ. ಇದರಲ್ಲಿ ಅಕ್ರಮಗಳಾಗಿವೆ. ತನಿಖೆ ನಡೆದಿದೆ. ದೋಷಾರೋಪಣ ಪಟ್ಟಿ ಸಲ್ಲಿಸಲು ಅನುಮತಿ ನೀಡಿ ಎಂದು 2023ರಲ್ಲಿ ಪ್ರಾಸಿಕ್ಯೂಷನ್​ಗೆ ಮನವಿ ಸಲ್ಲಿಸಲಾಗಿದೆ. ಅದೇ ರೀತಿ ಶಶಿಕಲಾ ಜೊಲ್ಲೆ, ಮುರುಗೇಶ್‌ ನಿರಾಣಿ, ಜನಾರ್ಧನ ರೆಡ್ಡಿ ಅವರ ಪ್ರಕರಣದಲ್ಲೂ ಪ್ರಾಸಿಕ್ಯೂಷನ್​ಗೆ ಮನವಿ ಸಲ್ಲಿಸಲಾಗಿತ್ತು. ಅದ್ಯಾವುದಕ್ಕೂ ಸಹಮತಿಸದ ರಾಜ್ಯಪಾಲರು ಏಕಾಏಕಿ ಸಿದ್ದರಾಮಯ್ಯ ಅವರ ಪ್ರಕರಣದಲ್ಲಿ ನಡೆದುಕೊಂಡ ರೀತಿ ಪ್ರಶ್ನಾರ್ಹವಾಗಿದೆ ಎಂದರು.

ಹಿಂದೆ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳದಲ್ಲಿ ರಾಜ್ಯಪಾಲರು ನಡೆದುಕೊಂಡಿರುವ ರೀತಿ ಚರ್ಚೆಗೆ ಗ್ರಾಸವಾಗಿತ್ತು. ಈಗ ಕರ್ನಾಟಕದಲ್ಲೂ ಆರಂಭವಾಗಿದೆ. ಬಿಜೆಪಿಯೇತರ ಸರ್ಕಾರಗಳನ್ನು ಅಸ್ಥಿರಗೊಳಿಸಲು ದೇಶಾದ್ಯಂತ ಹುನ್ನಾರಗಳು ನಡೆದಿವೆ ಎಂದು ಟೀಕಿಸಿದರು.

ರಾಜ್ಯಪಾಲರು ನಡೆದುಕೊಂಡ ರೀತಿ ಜಗತ್ತಿಗೆ ಗೊತ್ತಿದೆ. ಕಾನೂನಿನಲ್ಲಿ ಅವಕಾಶ ಇಲ್ಲದೇ ಇದ್ದರೂ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಲಾಗಿದೆ. ಈ ವೇಳೆ ಸಚಿವ ಸಂಪುಟದ ಸಲಹೆಯನ್ನು ಪರಿಗಣಿಸಿಲ್ಲ ಎಂದರು.

ಇದನ್ನೂ ಓದಿ:ಪ್ರಾಸಿಕ್ಯೂಷನ್ ಅನುಮತಿಯಿಂದ ಸರ್ಕಾರ ಸ್ವಲ್ಪಮಟ್ಟಿಗೆ ಶೇಕ್​ ಆಗಿದೆ: ಜಿ.ಪರಮೇಶ್ವರ್ - Prosecution against CM

Last Updated : Aug 21, 2024, 5:54 PM IST

ABOUT THE AUTHOR

...view details