ಮಂಡ್ಯ: ನಾಗಮಂಗಲದಲ್ಲಿ ಗಣಪತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ಪಟ್ಟಣದ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ಅಷ್ಟೇ ಅಲ್ಲದೇ, ಬುಧವಾರ ರಾತ್ರಿಯಿಂದಲೇ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಪರಿಸ್ಥಿತಿ ತಿಳಿಗೊಳಿಸಲು ಕ್ರಮ-ಜಿಲ್ಲಾಧಿಕಾರಿ: ಈ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, "ನಾಗಮಂಗಲ ಪಟ್ಟಣ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಗಣೇಶ ಮೆರವಣಿಗೆ ಅನ್ಯಕೋಮಿನ ಪ್ರಾರ್ಥನಾ ಕೇಂದ್ರದ ಬಳಿ ತಲುಪಿದಾಗ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ನಂತರ ಪ್ರತಿಭಟನೆಗಳು ನಡೆದಿವೆ. ತಕ್ಷಣವೇ ನಾನು ಮತ್ತು ಎಸ್ಪಿ, ಐಜಿಯವರು ಸ್ಥಳಕ್ಕೆ ಬಂದಿದ್ದೇವೆ. ಪರಿಸ್ಥಿತಿ ತಿಳಿಗೊಳಿಸಲು ಎಲ್ಲ ಕ್ರಮ ಕೈಗೊಂಡಿದ್ದೇವೆ. 3 ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಮುಂಜಾಗೃತಾ ಕ್ರಮವಾಗಿ ಸೆಪ್ಟೆಂಬರ್ 14ರ ಮಧ್ಯರಾತ್ರಿ 12 ಗಂಟೆಯವರೆಗೂ ಸೆಕ್ಷನ್ 144 ಜಾರಿಗೊಳಿಸಿದ್ದೇವೆ" ಎಂದು ತಿಳಿಸಿದರು.