ಕರ್ನಾಟಕ

karnataka

ETV Bharat / state

ಹೂವುಗಳಿಂದ ಹೋಳಿ ಬಣ್ಣ ತಯಾರಿಕೆ: ಮಂಗಳೂರಿನ ವಿಶೇಷಚೇತನರಿಗೆ ಸ್ವಾವಲಂಬಿ ತರಬೇತಿ - HOLI POWDER PREPARATION

ಬಣ್ಣಗಳ ಹಬ್ಬ ಹೋಳಿ ಸಮೀಪಿಸುತ್ತಿದೆ. ಮಂಗಳೂರಿನ ಸಾನಿಧ್ಯ ಶಾಲೆಯ ವಿಶೇಷಚೇತನರು, ರಾಸಾಯನಿಕ ರಹಿತವಾಗಿ ಹೂವುಗಳಿಂದ ಬಣ್ಣಗಳ ತಯಾರಿಯಲ್ಲಿ ತೊಡಗಿದ್ದಾರೆ.

Specially challenged involved in the preparation of colors
ಬಣ್ಣಗಳ ತಯಾರಿಯಲ್ಲಿ ತೊಡಗಿರುವ ವಿಶೇಷಚೇತನರು (ETV Bharat)

By ETV Bharat Karnataka Team

Published : Feb 20, 2025, 6:11 PM IST

ವರದಿ: ವಿನೋದ್​ ಪುದು

ಮಂಗಳೂರು: 2025ರ ಮಾರ್ಚ್​ 14ರಂದು ಹೋಳಿ ಆಚರಣೆ ಇಡೀ ದೇಶಾದ್ಯಂತ ರಂಗು ತುಂಬಲಿದೆ. ಹೋಳಿ ಹಬ್ಬವೆಂದರೆ ಬಣ್ಣಗಳ ಹಬ್ಬ. ಈ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ತರಹೇವಾರಿ ಬಣ್ಣಗಳು ಸಿಗುತ್ತವೆ. ಆದರೆ ಮಂಗಳೂರಿನಲ್ಲಿ ರಾಸಾಯನಿಕರಹಿತವಾಗಿ ಹೂವಿನಿಂದ ಹೋಳಿ ಬಣ್ಣವನ್ನು ತಯಾರು ಮಾಡುವ ಕಾರ್ಯವನ್ನು ವಿಶೇಷಚೇತನರು ಮಾಡುತ್ತಿದ್ದಾರೆ.

ಶಕ್ತಿನಗರದಲ್ಲಿರುವ ಸಾನಿಧ್ಯ ವಿಶೇಷ ಮಕ್ಕಳ ಶಾಲೆ ಮತ್ತು ತರಬೇತಿ ಸಂಸ್ಥೆಯಲ್ಲಿ ಕಳೆದ ಎರಡು ವಾರಗಳಿಂದ ವಿಶೇಷಚೇತನರು ವಿಶೇಷ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 25 ವರ್ಷ ಮೇಲ್ಪಟ್ಟ ಸುಮಾರು 20 ವಿಶೇಷಚೇತನರು ಮುಂದಿನ ತಿಂಗಳು ನಡೆಯುವ ಹೋಳಿ ಹಬ್ಬಕ್ಕೆ ಬಣ್ಣ ತಯಾರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಹೂವುಗಳಿಂದ ಹೋಳಿ ಬಣ್ಣ ತಯಾರಿಕೆ: ಮಂಗಳೂರಿನ ವಿಶೇಷಚೇತನರಿಗೆ ಸ್ವಾವಲಂಬಿ ತರಬೇತಿ (ETV Bharat)

ಸಾನಿಧ್ಯ ಶಾಲೆಯಲ್ಲಿ ಸಾನಿಧ್ಯ ಗ್ರೀನ್ ಸ್ಕಿಲ್ಲಿಂಗ್ ಪ್ರಾಜೆಕ್ಟ್ ಅಡಿಯಲ್ಲಿ ಕ್ರಾಫ್ಟಿಜನ್ ಫೌಂಡೇಶನ್​ನಿಂದ ಮೂವರು ಶಿಕ್ಷಕಿಯರು ತರಬೇತಿ ಪಡೆದಿದ್ದರು. ಈ ತರಬೇತಿ ಪಡೆದ ಶಿಕ್ಷಕರಿಂದ ವಿಶೇಷಚೇತನ ಮಕ್ಕಳಿಗೆ ಅಗರಬತ್ತಿ, ಧೂಪದ ಬತ್ತಿ ಮತ್ತು ಹೋಳಿ ಹುಡಿ ತಯಾರಿಸುವ ತರಬೇತಿ ನೀಡಲಾಗಿದೆ. ಈ ತರಬೇತಿ ಪಡೆದ ವಿಶೇಷಚೇತನರಿಂದ ಹೋಳಿ ಹುಡಿ ತಯಾರಿ ನಡೆಯುತ್ತಿದೆ.

ಬಣ್ಣಗಳ ತಯಾರಿಯಲ್ಲಿ ತೊಡಗಿರುವ ವಿಶೇಷ ಚೇತನರು (ETV Bharat)

ವಿಶೇಷಚೇತನರು ಹೋಳಿ ಹುಡಿ ತಯಾರಿಸಲು ಬೇಕಾದ ಹೂವನ್ನು ಸಾನಿಧ್ಯ ಶಾಲೆಯಿಂದ ವ್ಯವಸ್ಥೆ ಮಾಡಲಾಗುತ್ತಿದೆ. ದೇವಸ್ಥಾನಗಳಲ್ಲಿ ಹಾಕಲಾಗುವ, ಮದುವೆ ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಸಲಾಗುವ ಹೂವನ್ನು ಮರುದಿನ ಸಾನಿಧ್ಯ ಶಾಲೆಗೆ ತರಲಾಗುತ್ತದೆ. ಈ ಹೂವನ್ನು ಬಿಡಿಸುವುದು, ನೆರಳು, ಬಿಸಿಲು ಬೀಳದಂತೆ ಒಣಗಿಸುವುದು, ಅದನ್ನು ಹುಡಿ ಮಾಡುವುದು, ಅದನ್ನು ಹೋಳಿ ಹುಡಿಯಾಗಿ ತಯಾರಿಸುವುದನ್ನು ಬೇರೆ ಬೇರೆ ವಿದ್ಯಾರ್ಥಿಗಳು ಮಾಡುತ್ತಿದ್ದಾರೆ.

ಹೂವಿನಿಂದ ತಯಾರಿಸಿರುವ ಬಣ್ಣಗಳ ಪ್ಯಾಕೆಟ್​ (ETV Bharat)

ವಿಶೇಷಚೇತನರು ತಯಾರಿಸಿದ ಈ ಹೋಳಿ ಹುಡಿಯನ್ನು ಫೆ.22 ಮತ್ತು 23ಕ್ಕೆ ನಡೆಯುವ ಸಾನಿಧ್ಯ ಶಾಲೆಯ ಕಾರ್ಯಕ್ರಮದಲ್ಲಿ ಮಾರಾಟ ಮಾಡಲಿದ್ದಾರೆ. ಬೆಂಗಳೂರಿನ ಸಂಸ್ಥೆಯು ಈ ಹೋಳಿ ಹುಡಿಯನ್ನು ಖರೀದಿಸುವ ಭರವಸೆಯನ್ನು ನೀಡಿದೆ.

ರಾಸಾಯನಿಕರಹಿತ ಹೋಳಿ ಹುಡಿ:ಸಾನಿಧ್ಯ ಶಾಲೆಯ ವಿಶೇಷಚೇತನರು ತಯಾರಿಸುವ ಹೋಳಿ ಹುಡಿ ರಾಸಾಯನಿಕ ರಹಿತ ಹೋಳಿ ಹುಡಿಯಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಹೋಳಿ ಹುಡಿಗಳು ರಾಸಾಯನಿಕ ಮಿಶ್ರಿತ ಬಣ್ಣಗಳಾಗಿದ್ದರೆ, ಈ ವಿಶೇಷಚೇತನರು ತಯಾರಿಸುತ್ತಿರುವ ಹೋಳಿ ಹುಡಿ ರಾಸಾಯನಿಕ ರಹಿತವಾಗಿದೆ. ಹೂವಿನ ದಳದ ಹುಡಿ, ಮೈದಾ, ಅಡುಗೆ ಬಣ್ಣವನ್ನು ಮಾತ್ರ ಬಳಸಲಾಗುತ್ತಿದೆ.

ಬಣ್ಣಗಳ ತಯಾರಿಯಲ್ಲಿ ತೊಡಗಿರುವ ವಿಶೇಷ ಚೇತನರು (ETV Bharat)

ಶಿಕ್ಷಕಿ ಅಕ್ಷತಾ ಮಾತನಾಡಿ, "ಈ ಕಾರ್ಯದಲ್ಲಿ 15 ರಿಂದ 20 ವಿಶೇಷಚೇತನರು ತೊಡಗಿಸಿಕೊಂಡಿದ್ದಾರೆ. ಎರಡು ವಾರದಿಂದ ಸುಮಾರು 15 ಕೆ.ಜಿ ಹೋಳಿ ಹುಡಿ ಮಾಡಲಾಗಿದೆ. ಇದನ್ನು ಫೆ.22 ರಂದು ನಮ್ಮ ಕಾರ್ಯಕ್ರಮದಲ್ಲಿ ಮಾರಾಟ ಮಾಡಲಾಗುತ್ತದೆ" ಎಂದರು.

ಬಣ್ಣಗಳ ತಯಾರಿಗೆ ರಾಶಿ ಹಾಕಿರುವ ಹೂ (ETV Bharat)

ಸಾನಿಧ್ಯ ವಿಶೇಷ ಮಕ್ಕಳ ಶಾಲೆ ಮತ್ತು ತರಬೇತಿ ಸಂಸ್ಥೆ ಅಧ್ಯಕ್ಷ ಮಹಾಬಲ ಮಾರ್ಲ ಮಾತನಾಡಿ, "ಕ್ರಾಫ್ಟಿಜನ್ ಫೌಂಡೇಶನ್​ನಲ್ಲಿ ಸಾನಿಧ್ಯ ಗ್ರೀನ್ ಸ್ಕಿಲ್ಲಿಂಗ್ ಪ್ರಾಜೆಕ್ಟ್​ನ ಮೂವರು ಶಿಕ್ಷಕಿಯರು ತರಬೇತಿ ಪಡೆದುಕೊಂಡು ಬಂದಿದ್ದರು. ಅವರ ಮೂಲಕ ಸಾನಿಧ್ಯದ ವಿಶೇಷಚೇತನರು ರಾಸಾಯನಿಕ ರಹಿತವಾಗಿ ಹೂವಿನ ದಳದಿಂದ ಹೋಳಿ ಹುಡಿ ತಯಾರಿಸುತ್ತಿದ್ದಾರೆ" ಎಂದರು.

ಇದನ್ನೂ ಓದಿ:ಕಾಲು ಕಳೆದುಕೊಂಡರೂ ಕುಗ್ಗದ ಉತ್ಸಾಹ; ಗಗನಕ್ಕೆ ಹಾರಲು ಸಜ್ಜಾಗಿದ್ದಾರೆ ವಿಶ್ವದ ಮೊದಲ ವಿಶೇಷಚೇತನ ಗಗನಯಾತ್ರಿ!

ABOUT THE AUTHOR

...view details