ದಾವಣಗೆರೆ:ಬೇಸಿಗೆಯ ಕಾವು ಏರಿಕೆಯಾಗುತ್ತಿದ್ದಂತೆ ಬೆಣ್ಣೆನಗರಿ ದಾವಣಗೆರೆಯಲ್ಲಿ ಲೋಕಸಭಾ ಚುನಾವಣೆಯ ಕಾವು ಸಹ ಏರುತ್ತಿದೆ. ಈ ಬಾರಿ ಇಬ್ಬರು ಮಹಿಳಾ ಮಣಿಗಳ ನಡುವೆ ಈ ಚುನಾವಣಾ ಹಣಾಹಣಿಗೆ ಕಾರಣವಾಗಿದೆ. ಶಾಮನೂರು ಶಿವಶಂಕರಪ್ಪನವರ ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದರೆ, ಹಾಲಿ ಸಂಸದ ಜಿಎಂ ಸಿದ್ದೇಶ್ವರ್ ಅವರ ಪತ್ನಿ ಗಾಯಿತ್ರಿ ಸಿದ್ದೇಶ್ವರ್ ಬಿಜೆಪಿಯಿಂದ ಸ್ಪರ್ಧೆಗಿಳಿದಿದ್ದಾರೆ. ಮತದಾರ ಯಾರಿಗೆ ಮಣೆ ಹಾಕಲಿದ್ದಾನೆ ಅನ್ನೋದನ್ನು ಕಾದು ನೋಡಬೇಕಿದೆ.
ದಾವಣಗೆರೆ ಕ್ಷೇತ್ರ ರಚನೆಯಾದಾಗಿನಿಂದ ಈ ತನಕ ಒಟ್ಟು 12 ಚುನಾವಣೆಗಳು ನಡೆದಿದ್ದು, ಇದು 13ನೇ ಸಾರ್ವತ್ರಿಕ ಚುನಾವಣೆಯಾಗಿದೆ. ಈವರೆಗಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 6 ಬಾರಿ ಗೆಲುವು ದಾಖಲಿಸಿ ಸಮಬಲ ಸಾಧಿಸಿವೆ. ಈ ಬಾರಿ ಗೆದ್ದು ಮೇಲುಗೈ ಸಾಧಿಸುವತ್ತ ಉಭಯ ಪಕ್ಷಗಳ ಚಿತ್ತ ನೆಟ್ಟಿದೆ.
ಸಾರ್ವತ್ರಿಕ ಚುನಾವಣೆ ಇತಿಹಾಸ:1977 ರಿಂದ 2019ರ ವರೆಗೆ ಕ್ಷೇತ್ರದಲ್ಲಿ ಒಟ್ಟು 12 ಸಾರ್ವತ್ರಿಕ ಚುನಾವಣೆಗಳು ನಡೆದಿವೆ. 1977ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಕೊಂಡಜ್ಜಿ ಬಸಪ್ಪ ಮೊಟ್ಟಮೊದಲ ಬಾರಿಗೆ ಗೆದ್ದು ಬೀಗಿದರು. ಪ್ರಮುಖ ರಾಜಕೀಯ ಪಕ್ಷಗಳಾದ ಕೈ ಮತ್ತು ಕಮಲ ತಲಾ 6 ಬಾರಿ ಗೆಲುವು ಸಾಧಿಸಿಕೊಂಡು ಬಂದಿವೆ. ಕಾಂಗ್ರೆಸ್ನಿಂದ ಕೊಂಡಜ್ಜಿ ಬಸಪ್ಪ ಮತ್ತು ಟಿವಿ ಚಂದ್ರಶೇಖರಪ್ಪ ಕ್ರಮವಾಗಿ 1 ಬಾರಿ, ಚನ್ನಯ್ಯ ಒಡೆಯರ್ 3 ಬಾರಿ, ಶಾಮನೂರು ಶಿವಶಂಕರಪ್ಪ 1 ಬಾರಿ ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಜಿ. ಮಲ್ಲಿಕಾರ್ಜುನಪ್ಪ 2 ಬಾರಿ, ಜಿಎಂ ಸಿದ್ದೇಶ್ವರ್ 4 ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. 1998ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಮಲ್ಲಿಕಾರ್ಜುನಪ್ಪ, ಕಾಂಗ್ರೆಸ್ ಪ್ರತಿಸ್ಪರ್ಧಿಯಾಗಿದ್ದ ಶಾಮನೂರು ಶಿವಶಂಕರಪ್ಪ ವಿರುದ್ಧ ಪರಭಾವಗೊಂಡಿದ್ದರು.
ಅಭ್ಯರ್ಥಿಗಳು ಪಡೆದ ಮತಗಳೆಷ್ಟು:2004ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಜಿಎಂ ಸಿದ್ದೇಶ್ವರ್ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಎಸ್ ಎಸ್ ಮಲ್ಲಿಕಾರ್ಜುನ್ ಸೋಲು ಕಂಡಿದ್ದರು. 32,676 ಮತಗಳ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. 2009ರಲ್ಲಿ ಜಿಎಂ ಸಿದ್ದೇಶ್ವರ್ ಎರಡನೇ ಬಾರಿ ಆಯ್ಕೆ ಆದರು. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ನ ಎಸ್ ಎಸ್ ಮಲ್ಲಿಕಾರ್ಜುನ್ ಮತ್ತೆ ಸೋಲು ಕಾಣಬೇಕಾಯಿತು. ಕೇವಲ 2024 ಮತಗಳ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.
2014ರ ಲೋಕ ಚುನಾವಣೆಯಲ್ಲಿ ಬಿಜೆಪಿಯಿಂದ ಜಿಎಂ ಸಿದ್ದೇಶ್ವರ್ ಮೂರನೇ ಬಾರಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದರೆ, ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಎಸ್ ಎಸ್ ಮಲ್ಲಿಕಾರ್ಜುನ್ ಮತ್ತೆ ಸೋಲುಂಡರು. ಈ ಚುನಾವಣೆಯಲ್ಲಿ 17,607 ಮತಗಳ ಅಂತರದಲ್ಲಿ ಬಿಜೆಪಿ ಗೆಲುವು ಕಂಡಿತ್ತು. 2019ರಲ್ಲಿ ಮತ್ತೆ ಬಿಜೆಪಿಯಿಂದ ಜಿಎಂ ಸಿದ್ದೇಶ್ವರ್ ಕಾಂಗ್ರೆಸ್ ಅಭ್ಯರ್ಥಿ ಹೆಚ್ ಬಿ ಮಂಜಪ್ಪ ವಿರುದ್ಧ ನಾಲ್ಕನೇ ಬಾರಿ ಗೆಲುವು ಸಾಧಿಸಿದ್ದರು. 1,69,702 ಲಕ್ಷ ಮತಗಳ ಭಾರೀ ಅಂತರಿಂದ ಬಿಜೆಪಿ ಗೆದ್ದು ಬೀಗಿತ್ತು.