ದಾವಣಗೆರೆ: ಸರ್ಕಾರಿ ಶಾಲೆ ಎಂದರೇ ಮೂಗು ಮುರಿಯುವವರೇ ಹೆಚ್ಚು. ಅದರಲ್ಲೂ ಪ್ರಸ್ತುತ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಸಂಖ್ಯೆ ಅಧಿಕವಾಗಿದೆ. ಆದರೆ ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪುಟ್ಟ ಸರ್ಕಾರಿ ಶಾಲೆ ಇದೀಗ ಫುಲ್ ಹೈಟೆಕ್ ಆಗಿದೆ. ವಿಶೇಷ ಎಂದರೆ ಈ ಶಾಲೆಯಲ್ಲಿರುವ ವ್ಯವಸ್ಥೆ ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವಂತಿವೆ. ಈ ಶಾಲೆ ಇರುವ ಗ್ರಾಮದಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚಿದ್ದು, ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಿ ಉರ್ದು ಬದಲು ಕನ್ನಡದ ಪ್ರೇಮ ಮೆರೆದಿದ್ದಾರೆ.
ಹರಪನಹಳ್ಳಿ ತಾಲೂಕಿನ ರಾಮನಗರದಲ್ಲಿರುವ ಪುಟ್ಟ ಸರ್ಕಾರಿ ಶಾಲೆ ಇದೀಗ ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವ ರೀತಿ ತಲೆ ಎತ್ತಿದೆ. ಊರಿನ ಹೆಸರಿನಲ್ಲೇ ರಾಮನಿರುವ ರಾಮನಗರ ಗ್ರಾಮದಲ್ಲಿ ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಗ್ರಾಮದ ಗ್ರಾಮಸ್ಥರು ತಮ್ಮ ಮಕ್ಕಳನ್ನು ಉರ್ದು ಶಾಲೆಗೆ ಸೇರಿಸುವ ಬದಲು ಸರ್ಕಾರಿ ಶಾಲೆಗೆ ಸೇರಿಸಿ ಕನ್ನಡ ಪ್ರೇಮ ಮೆರೆದಿದ್ದಾರೆ.
ಅಲ್ಲದೇ ಈ ಶಾಲೆಯನ್ನು ಹೈಟೆಕ್ ಶಾಲೆ ಮಾಡುವಲ್ಲಿ ಮುಸ್ಲಿಂ ಸಮುದಾಯದ ಪಾತ್ರ ಹೆಚ್ಚಿದೆ. ದಾಖಲಾತಿಯಲ್ಲಿ ವಿಶೇಷ ಸಾಧನೆ ಮಾಡುವಲ್ಲಿ ಶಾಲೆಯ ಮುಖ್ಯಶಿಕ್ಷಕ ಎಂ.ಎಂ. ಚಂದ್ರಪ್ಪ ಅವರ ಶ್ರಮ ಕೂಡ ಅಧಿಕವಾಗಿದೆ. ಈ ಶಾಲೆ ಗುಣಮಟ್ಟದ ಶಿಕ್ಷಣ, ಕಟ್ಟಡ, ಉತ್ತಮ ವಾತಾರಣದ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡುವಂತೆ ಮಾಡಿದ್ದೇ ಚಂದ್ರಪ್ಪ ಅವರು. ಇದಕ್ಕೆ ಬೆನ್ನೆಲುಬಾಗಿ ಗ್ರಾಮಸ್ಥರು ನಿಂತಿದ್ದು, ಸಾಧನೆ ಮಾಡಲು ಸಾಧ್ಯವಾಗಿದೆ.
"ನಮ್ಮದು ದಾಖಲಾತಿ ಹೆಚ್ಚಿರುವ ಶಾಲೆಯಾಗಿದೆ. ಕಾನ್ವೆಂಟ್ ರೀತಿಯಲ್ಲಿ ನಲಿ-ಕಲಿ ಮೂರು ಘಟಕಗಳನ್ನು ತೆಗೆದಿದ್ದು, ಸಮವಸ್ತ್ರ, ಐಡಿ ಕಾರ್ಡ್, ಸ್ಮಾರ್ಟ್ ಕ್ಲಾಸ್, ವ್ಯವಸ್ಥೆ ಮಾಡಿದ್ದೇವೆ. ಕುಡಿಯುವ ನೀರಿಗಾಗಿ ವಾಟರ್ ಫಿಲ್ಟರ್ ಇದೆ. ಅಲ್ಪಾಸಂಖ್ಯಾತ ಮಕ್ಕಳೇ ಹೆಚ್ಚಿದ್ದು ಉರ್ದು ಶಾಲೆಗೆ ಸೇರಿಸಬಹುದಿತ್ತು. ಬದಲಿಗೆ ಕನ್ನಡ ಶಾಲೆಗೆ ಸೇರಿಸಿ ಕನ್ನಡವನ್ನು ಉಳಿಸುತ್ತಿದ್ದಾರೆ, ಒಟ್ಟು 137 ದಾಖಲಾತಿ ಇದೆ. ಇಂಗ್ಲಿಷ್ ಕಲಿಕೆ ಹೆಚ್ಚು ಮಾಡಿದ್ದು, ಗಣಿತ ಕಲಿಕೆ ಮಾಡಿ ಖಾಸಗಿ ಶಾಲೆಗೆ ಶೆಡ್ಡು ಹೊಡೆದಿದ್ದೇವೆ" ಎನ್ನುತ್ತಾರೆ ಮುಖ್ಯಶಿಕ್ಷಕ ಎಂ.ಎಂ. ಚಂದ್ರಪ್ಪ.