ಬೆಳಗಾವಿ:"ವಿಶ್ವವಿದ್ಯಾಲಯಗಳು ಕೇವಲ ಪದವಿ ಉತ್ಪಾದಿಸುವ ಕಾರ್ಖಾನೆಗಳಲ್ಲ. ವಿಶ್ವವಿದ್ಯಾಲಯಗಳು ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಪೋಷಿಸುವ ಕೇಂದ್ರಗಳಾಗಬೇಕು. ಪದವಿಯ ನಂತರ ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ನಿಟ್ಟಿನಲ್ಲಿ ಜವಾಬ್ದಾರಿಯುತ ನಾಗರಿಕರಾಗಿ ರೂಪಗೊಳ್ಳಬೇಕು" ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಕರೆ ನೀಡಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ 'ಜ್ಞಾನ ಸಂಗಮ' ಸಭಾಂಗಣದಲ್ಲಿ ಇಂದು ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 12ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
"ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ವಿದ್ಯಾರ್ಥಿಗಳು ಪದವಿಯ ನಂತರ ಸಮಗ್ರ ಜ್ಞಾನ ಪಡೆದುಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯುವ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಭಾರತವನ್ನು ಮತ್ತಷ್ಟು ಬಲಿಷ್ಟಗೊಳಿಸಬೇಕು" ಎಂದರು.
"ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ಹೋರಾಡಿದ ಕಿತ್ತೂರಿನ ವೀರರಾಣಿ ಹೆಸರಿನ ವಿಶ್ವವಿದ್ಯಾಲಯ ಇದಾಗಿದೆ. ರಾಣಿ ಚನ್ನಮ್ಮ ಎಂದರೆ ಅದಮ್ಯ ರಾಷ್ಟ್ರಪ್ರೇಮ, ಸ್ವಾಭಿಮಾನ ಹಾಗೂ ಸ್ತ್ರೀಶಕ್ತಿ ಸಂಕೇತ. ಬೆಳಗಾವಿ ಮತ್ತು ವಿಜಯಪುರ ಭಾಗದ ಜನರಿಗೆ ಜ್ಞಾನದ ಬೆಳಕು ಹಂಚುವ ಪಾತ್ರ ವಿಶ್ವವಿದ್ಯಾಲಯ ವಹಿಸಿಕೊಂಡಿದೆ. ವಿಶ್ವವಿದ್ಯಾಲಯದ ಬೆಳವಣಿಗೆ ಒಂದು ಭಾಗದ ಅಭಿವೃದ್ಧಿ ಮಾತ್ರವಲ್ಲದೆ ರಾಜ್ಯ ಮತ್ತು ರಾಷ್ಟ್ರದ ಶೈಕ್ಷಣಿಕ ಅಭಿವೃದ್ಧಿ ಪರ ಕೊಡುಗೆಗಳನ್ನು ನೀಡುತ್ತಿದೆ" ಎಂದು ತಿಳಿಸಿದರು.
ಮಂಗಳೂರಿನ ವಿಜ್ಞಾನಿ ಡಾ.ಇಡ್ಯಾ ಕರುಣಾಸಾಗರ ಘಟಿಕೋತ್ಸವ ಭಾಷಣ ಮಾಡಿ, "ಘಟಿಕೋತ್ಸವದಲ್ಲಿ ಪದವಿಗಳನ್ನು ಪಡೆಯುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಒಂದು ದೊಡ್ಡ ಮೈಲಿಗಲ್ಲು. ಇನ್ನು ಭಾರತದಲ್ಲಿ ಪ್ರತೀ ವರ್ಷ ಎಷ್ಟೋ ಮಿಲಿಯನ್ ಮಕ್ಕಳು ಶಾಲೆಗಳಿಗೆ ದಾಖಲಾಗುತ್ತಾರೆ. ಆದರೆ ಕೆಲ ಮಿಲಿಯನ್ ಮಾತ್ರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾಗುತ್ತಾರೆ. ಭಾರತದಲ್ಲಿ ವಾರ್ಷಿಕ ಪದವೀಧರರ ಸಂಖ್ಯೆ ಕೇವಲ 5.6 ಮಿಲಿಯನ್ ಇದೆ. ಅವರಲ್ಲಿ ನೀವು ಅದೃಷ್ಟವಂತರು" ಎಂದು ಶ್ಲಾಘಿಸಿದರು.