ಮಂಗಳೂರು:7 ವರ್ಷದ ನಂತರ ಮತ್ತೆ ಮಂಗಳೂರು-ಲಕ್ಷದ್ವೀಪದ ನಡುವೆ ಹೈಸ್ಪೀಡ್ ಹಡಗು ಸಂಚಾರ ಆರಂಭವಾಗಿದೆ. ಲಕ್ಷದ್ವೀಪದಿಂದ ಗುರುವಾರ ಸಂಜೆ ಆಗಮಿಸಿದ ಪರೇಲಿ ಎಂಬ ಐಷಾರಾಮಿ ಹಡಗಿನಲ್ಲಿ ಆಗಮಿಸಿದ ಪ್ರಯಾಣಿಕರನ್ನು ನಗರದ ಹಳೆ ಬಂದರಿನಲ್ಲಿ ಸ್ವಾಗತಿಸಲಾಯಿತು. ಈ ಐಷಾರಾಮಿ ಹಡಗಿನಲ್ಲಿ 150 ಪ್ರಯಾಣಿಕರು ಸೇರಿದಂತೆ 8 ಮಂದಿ ಸಿಬ್ಬಂದಿ, ಓರ್ವ ಪೈಲಟ್, ಚೀಫ್ ಇಂಜಿನಿಯರ್, ಸಹಾಯಕ ಇಂಜಿನಿಯರ್ ಬಂದಿಳಿದಿದ್ದಾರೆ. ಮಾಜಿ ಶಾಸಕ ಜೆ.ಆರ್.ಲೋಬೊ, ಟಿ.ಕೆ. ಸುಧೀರ್ ಮತ್ತಿತರರು ಪ್ರಯಾಣಿಕರನ್ನು ಸ್ವಾಗತಿಸಿದರು. ಈ ಹಡಗು ಶನಿವಾರ ಬೆಳಗ್ಗೆ ಮತ್ತೆ ಲಕ್ಷದ್ವೀಪದತ್ತ ಪ್ರಯಾಣ ಬೆಳೆಸಲಿದೆ.
7 ವರ್ಷದ ಬಳಿಕ ಹೈಸ್ಪೀಡ್ ಹಡಗು ಲಕ್ಷದ್ವೀಪದಿಂದ ಆಗಮಿಸಿದ್ದು, ಇದರಿಂದ ಮತ್ತೆ ಮಂಗಳೂರು ಹಾಗೂ ಲಕ್ಷದ್ವೀಪದ ನಡುವಿನ ಬಾಂಧವ್ಯ ಬೆಸೆಯುವ ಆಶಾದಾಯಕ ಬೆಳವಣಿಗೆ ಆದಂತಾಗಿದೆ.
ಸಾಮಾನ್ಯ ಹಡಗು ಲಕ್ಷದ್ವೀಪದಿಂದ ಮಂಗಳೂರು ತಲುಪಲು ಸರಾಸರಿ 13 ತಾಸುಗಳು ಅವಧಿ ಅವಶ್ಯಕ. ಆದರೆ, ಪರೇಲಿ ಎಂಬ ಈ ಹೈಸ್ಪೀಡ್ ಹಡಗು ಏಳು ತಾಸಿನಲ್ಲಿ ಮಂಗಳೂರು ತಲುಪಿದೆ. ಗುರುವಾರ ಬೆಳಗ್ಗೆ 8 ಗಂಟೆಗೆ ಲಕ್ಷದ್ವೀಪದ ಕ್ಲಿಂಟನ್ನಿಂದ ಹೊರಟ ಹಡಗು ಸಂಜೆ 5 ಗಂಟೆಯ ವೇಳೆಗೆ ಬಂದರಿಗೆ ಬಂದು ತಲುಪಿದೆ. ಪ್ರತಿ ಪ್ರಯಾಣಿಕರಿಗೆ 450 ರೂ. ಪ್ರಯಾಣ ದರ ಇತ್ತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.
2020ರ ಬಳಿಕ ಲಕ್ಷದ್ವೀಪದಿಂದ ಮಂಗಳೂರಿಗೆ ಪ್ರಯಾಣಿಕರ ಹಡಗು ಸಂಚಾರ ಸ್ಥಗಿತಗೊಂಡಿತ್ತು. ಆ ಬಳಿಕ ಇಲ್ಲಿನ ಹಡಗು ಕೇರಳದ ಕೊಚ್ಚಿ, ಕಲ್ಲಿಕೋಟೆಯತ್ತ ಸಂಚರಿಸುತ್ತಿತ್ತು. ಅಲ್ಲಿಂದ ರೈಲಿನಲ್ಲಿ ಮಂಗಳೂರು ತಲುಪಬೇಕಾಗಿತ್ತು. ಲಕ್ಷದ್ವೀಪದಿಂದ ಜನತೆ ಶಿಕ್ಷಣ, ವೈದ್ಯಕೀಯ ಸೇವೆ ಉದ್ಯೋಗ, ಸಂಬಂಧಿಕರಲ್ಲಿಗೆ ಸೇರಿದಂತೆ ಇನ್ನಿತರ ಕಾರಣಗಳಿಂದ ಮಂಗಳೂರಿಗೆ ಪ್ರಯಾಣಿಕರು ಆಗಮಿಸಿದ್ದಾರೆ.