ಬೆಂಗಳೂರು:ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಕುರಿತಂತೆ ಬಂಧನಕ್ಕೆ ಒಳಗಾಗಿದ್ದ ಅಪರಾಧಿಯು ಪೊಲೀಸರ ಕಣ್ತಪ್ಪಿಸಿ, ತಪ್ಪಿಸಿಕೊಂಡಿದ್ದ ಪರಿಣಾಮ ಶಿಕ್ಷೆ ಅನುಭವಿಸುವಂತಾಗಿದೆ. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸೋಮಶೇಖರ್ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಅಲ್ಲದೇ, ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಆರು ತಿಂಗಳ ಕಠಿಣ ಶಿಕ್ಷೆ ಹಾಗೂ ಒಂದು ಸಾವಿರ ರೂ. ದಂಡದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಜೊತೆಗೆ, ಅರ್ಜಿದಾರರು ಉದ್ದೇಶಪೂರ್ವಕವಾಗಿ ಎಎಸ್‌ಐನನ್ನು ತಳ್ಳಿ ಪೊಲೀಸರ ವಶದಿಂದ ತಪ್ಪಿಸಿಕೊಂಡಿದ್ದಾರೆ. ಅದನ್ನು ಪ್ರಾಸಿಕ್ಯೂಷನ್ ಸಾಕ್ಷಿಗಳೂ ಸಹ ದೃಢೀಕರಿಸಿದ್ದಾರೆ. ಹಾಗಾಗಿ, ಶಿಕ್ಷೆ ರದ್ದುಗೊಳಿಸಲಾಗದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಪರಾಧ ಎಸಗುವ ಸಂಭವನೀಯತೆ ಇದೆ ಎಂಬ ಅಂಶ ಪೊಲೀಸರಿಗೆ ಗೊತ್ತಾದಲ್ಲಿ ಮ್ಯಾಜಿಸ್ಟ್ರೇಟ್ ಅದೇಶ ಅಥವಾ ವಾರಂಟ್ ಇಲ್ಲದೆಯೂ ಘಟನೆ ತಪ್ಪಿಸುವುದಕ್ಕಾಗಿ ಯಾವುದೇ ವ್ಯಕ್ತಿಯನ್ನು ಬಂಧಿಸುವುದಕ್ಕೆ ಅವಕಾಶವಿದೆ. ಹಾಗಾಗಿ, ಶಿಕ್ಷೆ ಕಡಿತಗೊಳಿಸಲು ಸಾಧ್ಯವಿಲ್ಲ, ಆರೋಪಿ ಶಿಕ್ಷೆಯನ್ನು ಎದುರಿಸಲೇಬೇಕು ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ:2012ರ ಏಪ್ರಿಲ್ 7 ರಂದು ರಾತ್ರಿ ಹೊಸಹುಡ್ಯ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿತ್ತು. ಆಗ ಸಹಾಯಕ ಸಬ್ ಇನ್ಸ್ಪೆಕ್ಟರ್ ಸಾದಪ್ಪ ಮತ್ತಿತರ ಪೊಲೀಸರು ಗ್ರಾಮಕ್ಕೆ ತೆರಳಿದ್ದರು. ಆ ವೇಳೆ ಸೋಮಶೇಖರ್ ಮತ್ತು ವೆಂಕಟೇಶ್ ಅವರನ್ನು ಬಂಧಿಸಿ, ಅವರ ವಿರುದ್ಧ ಕೊಲೆ ಯತ್ನ ಸೇರಿ ಹಲವು ಪ್ರಕರಣಗಳನ್ನು ದಾಖಲಿಸಲಾಗಿತ್ತು.