ಕರ್ನಾಟಕ

karnataka

ETV Bharat / state

ನಕಲಿ ನೋಟು: ಅಪರಾಧಿಗೆ ಮೈಸೂರು ಕೋರ್ಟ್​ ವಿಧಿಸಿದ್ದ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್ - Fake Currency Note Case - FAKE CURRENCY NOTE CASE

ನಕಲಿ ನೋಟು ಪ್ರಕರಣದಲ್ಲಿ ಅಪರಾಧಿಗೆ ಮೈಸೂರು ನ್ಯಾಯಾಲಯ ವಿಧಿಸಿದ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ನಕಲಿ ನೋಟು ಪ್ರಕರಣ
ನಕಲಿ ನೋಟು ಪ್ರಕರಣ (ETV Bharat)

By ETV Bharat Karnataka Team

Published : Sep 19, 2024, 7:26 AM IST

ಬೆಂಗಳೂರು: 14 ವರ್ಷಗಳ ಹಿಂದೆ 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳ ಚಲಾವಣೆಗೆ ಯತ್ನಿಸಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ 5 ವರ್ಷ ಕಾರಾಗೃಹ ಶಿಕ್ಷೆಯನ್ನು ಹೈಕೋರ್ಟ್ ಬುಧವಾರ ಎತ್ತಿ ಹಿಡಿಯಿತು.

ಶಿಕ್ಷೆಗೊಳಗಾಗಿದ್ದ ಟಿ.ಎನ್.ಕುಮಾರ ಎಂಬಾತ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಅವರಿದ್ದ ಪೀಠ, ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2013ರ ಜ.3ರಂದು ಅಪರಾಧಿಗೆ ವಿಧಿಸಿದ್ಧ ಶಿಕ್ಷೆಯನ್ನು ಎತ್ತಿ ಹಿಡಿದಿದೆ.

ಅಪರಾಧಿ ತಕ್ಷಣ ವಿಚಾರಣಾ ನ್ಯಾಯಾಲಯಕ್ಕೆ ಶರಣಾಗಬೇಕು. ನ್ಯಾಯಾಲಯ ಆತನನ್ನು ವಶಕ್ಕೆ ಪಡೆದು ಕಾನೂನಿನ ಪ್ರಕಾರ ಸೆರೆಮನೆ ವಾಸಕ್ಕೆ ಕಳುಹಿಸಬೇಕು ಎಂದು ಪೀಠ ಆದೇಶಿಸಿತು. ಆರೋಪಿಯ ಬಳಿ ಇದ್ದ ನೋಟುಗಳು ನಕಲಿ ಎಂದು ಸಾಬೀತಾಗಿದೆಯಾದರೂ, ಆ ನೋಟುಗಳು ಹೇಗೆ ಬಂದವು ಎಂಬುದಕ್ಕೆ ಆತ ಯಾವುದೇ ವಿವರಣೆ ನೀಡಿಲ್ಲ. ದಾಳಿಯ ಸಂದರ್ಭದಲ್ಲಿ ಪೊಲೀಸರನ್ನು ಕಂಡ ತಕ್ಷಣ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಇದು ತನ್ನ ಬಳಿ ಇರುವುದು ನಕಲಿ ನೋಟುಗಳೆಂಬ ಅರಿವು ಆತನಿಗಿತ್ತು ಎನ್ನುವುದನ್ನು ತೋರಿಸುತ್ತದೆ. ವಶಪಡಿಸಿಕೊಂಡಿರುವ ಎಲ್ಲ ನೋಟುಗಳೂ ಒಂದೇ ಸರಣಿ ಸಂಖ್ಯೆ ಹೊಂದಿವೆ. ಒಂದು ಅಸಲಿ ನೋಟಿನ ಹಲವು ಬಣ್ಣದ ಫೋಟೋಕಾಪಿ ತೆಗೆದಿರುವುದು ಬರಿಗಣ್ಣಿಗೆ ಗೋಚರಿಸುತ್ತದೆ. ಇದರಿಂದ, ಆತನ ವಿರುದ್ಧದ ಅಪರಾಧಿಕ ಉದ್ದೇಶ ಸಾಬೀತಾಗಿದ್ದು, ವಿಚಾರಣಾ ನ್ಯಾಯಾಲಯ ಕೈಗೊಂಡಿರುವ ತೀರ್ಮಾನ ಸೂಕ್ತ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಕರದ ಹಿನ್ನೆಲೆ:ಪ್ರಾಸಿಕ್ಯೂಷನ್ ಪ್ರಕಾರ, 2010ರ ಮಾರ್ಚ್ 3ರಂದು ಮೈಸೂರಿನ ಇಂಜಿನಿಯರಿಂಗ್ ಸಂಸ್ಥೆಯ ಬಳಿ ಟಿ.ಎನ್.ಕುಮಾರನನ್ನು ಲಕ್ಷ್ಮೀಪುರ ಠಾಣೆ ಪೊಲೀಸರು ಬಂಧಿಸಿದ್ದರು. ಒಂದೇ ಸರಣಿ ಸಂಖ್ಯೆ ಹೊಂದಿದ್ದ 500 ರೂ. ಮುಖಬೆಲೆಯ 30 ನಕಲಿ ನೋಟುಗಳೊಂದಿಗೆ ಈತ ಸಿಕ್ಕಿಬಿದ್ದಿದ್ದ. ಅದು ನಕಲಿ ನೋಟುಗಳೆಂಬ ಅರಿವಿದ್ದೂ, ಅವುಗಳನ್ನು ಅಸಲಿ ನೋಟುಗಳ ಸೋಗಿನಲ್ಲಿ ಚಲಾವಣೆ ಮಾಡಲು ಮುಂದಾಗಿದ್ದ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 489 ಸಿ (ಖೋಟಾ ಅಥವಾ ನಕಲಿ ನೋಟುಗಳನ್ನು ಹೊಂದುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ಪೊಲೀಸರು, ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯ 5 ವರ್ಷ ಕಾರಾಗೃಹ ಶಿಕ್ಷೆ ಹಾಗೂ 3 ಸಾವಿರ ರೂ. ದಂಡ ವಿಧಿಸಿ ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಕುಮಾರ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದನು.

ಇದನ್ನೂ ಓದಿ:ಶಾಸಕ ಮುನಿರತ್ನ ಜಾಮೀನು ಅರ್ಜಿ ವಿಚಾರಣೆ: ನಾಳೆಗೆ ಆದೇಶ ಕಾಯ್ದಿರಿಸಿದ ಜನಪ್ರತಿನಿಧಿಗಳ‌ ನ್ಯಾಯಾಲಯ - Court reserved order for tomorrow

ABOUT THE AUTHOR

...view details