ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯಲ್ಲಿ 300 ರೂಪಾಯಿ ಲಂಚ ಪಡೆದ ಆರೋಪದಲ್ಲಿ ಮಹಿಳಾ ಟೈಪಿಸ್ಟ್ ಒಬ್ಬರನ್ನು ಸೇವೆಯಿಂದ ವಜಾಗೊಳಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಬಳಿಕ ಸೇವೆಯಿಂದ ವಜಾಗೊಂಡ ಮಹಿಳೆಗೆ ಕಡ್ಡಾಯ ನಿವೃತ್ತ ನೀಡಿದ್ದ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಜಿ.ಪಂಡಿತ್ ಮತ್ತು ಸಿ.ಎಂ.ಪೂಣಚ್ಚ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿತು. ಅಲ್ಲದೆ, ಅಮಾನತುಗೊಳಿಸಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ನೀಡಿದ್ದ ಆದೇಶ ರದ್ದುಪಡಿಸಿದ್ದು, ಮಹಿಳೆಯನ್ನು ಸೇವೆಯಿಂದ ವಜಾಗೊಳಿಸುವಂತೆ ಕೋರಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದೆ.
ಪ್ರಕರಣದಲ್ಲಿ ಆರೋಪಿ ಮಹಿಳೆ ಲಂಚಕ್ಕೆ ಬೇಡಿಕೆ ಇಡುವುದು ಮತ್ತು ಪಡೆಯುವುದು ಗಂಭೀರ ಸಾಮಾಜಿಕ ನೈತಿಕತೆಯ ವಿಷಯವಾಗಿದ್ದು, ಅಂತಹ ಬೆಳವಣಿಗೆಯನ್ನು ದೃಢವಾಗಿ ಎದುರಿಸಬೇಕಾಗುತ್ತದೆ ಎಂಬುದಾಗಿ ನ್ಯಾಯಮಂಡಳಿ ಹೇಳಿದೆ. ಆದರೆ, ಇಲಾಖಾ ವಿಚಾರಣೆಯಲ್ಲಿ ಲಂಚ ಪಡೆದುಕೊಂಡಿರುವ ಅಂಶ ಗೊತ್ತಾಗಿದ್ದರೂ, ಅದನ್ನು ಪರಿಗಣಿಸದೆ ಶಿಕ್ಷಯನ್ನು ಮಾರ್ಪಾಡು ಮಾಡಿದೆ. ಅಲ್ಲದೆ, ಶಿಸ್ತು ಪ್ರಾಧಿಕಾರ ಅಥವಾ ಮೇಲ್ಮನವಿ ಪ್ರಾಧಿಕಾರವು ವಿಧಿಸುವ ಶಿಕ್ಷೆಯು ನ್ಯಾಯಾಲಯದ ಆತ್ಮಸಾಕ್ಷಿಯನ್ನು ಆಘಾತಗೊಳಿಸುತ್ತದೆ ಎಂಬ ಅಂಶ ಗೊತ್ತಿದ್ದಲ್ಲಿ ಮಾತ್ರ ಶಿಕ್ಷೆಯ ಪ್ರಮಾಣ ಬದಲಾವಣೆ ಮಾಡಬಹುದು ಎಂದು ಸುಪ್ರೀಂ ಕೊರ್ಟ್ ಪ್ರಕರಣವೊಂದರಲ್ಲಿ ತಿಳಿಸಿದೆ. ಆದರೆ, ಈ ಪ್ರಕರಣದಲ್ಲಿ ಲಂಚ ಸ್ವೀಕರಿಸಿದವರನ್ನು ವಜಾ ಮಾಡಿರುವ ಶಿಕ್ಷೆ ಅಸಮಂಜಸವಾಗಿದೆ ಅಥವಾ ನ್ಯಾಯಾಲಯದ ಆತ್ಮ ಸಾಕ್ಷಿಗೆ ಅಘಾತವನ್ನುಂಟು ಮಾಡಿದೆ ಎಂಬುದಕ್ಕೆ ನ್ಯಾಯಮಂಡಳಿ ಸೂಕ್ತ ಕಾರಣ ನೀಡಿಲ್ಲ. ಆದರೂ, ಅಪರಾಧಿಯನ್ನು ವಜಾಗೊಳಿಸಿರುವ ಆದೇಶವನ್ನು ಮಾರ್ಪಡಿಸಿ ಕಡ್ಡಾಯ ನಿವೃತ್ತಿ ಮಾಡಲು ಆದೇಶಿಸಿದೆ. ಈ ರೀತಿಯಲ್ಲಿ ಆದೇಶ ನೀಡುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಜೊತೆಗೆ ಸರ್ಕಾರದ ಆದೇಶ ಸರಿಯಾಗಿದೆ ಎಂದು ತಿಳಿಸಿದೆ.
ಪ್ರಕರಣದ ಹಿನ್ನೆಲೆ:ದೂರುದಾರ ಗಣೇಶ್ ಶೆಟ್ಟಿಯಿಂದ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಕಾಂತಿ ಅವರು 300 ರೂ ಮತ್ತು ವಾಣಿಜ್ಯ ತೆರಿಗೆ ಅಧಿಕಾರಿ ಸಂಪತ್ ರಾವ್ ಎಸ್.ಬೊಮ್ಮಣ್ಣವರ್ ಅವರು 2000 ರೂ ಲಂಚ ಪಡೆದಿರುವ ಆರೋಪ ಹೊತ್ತಿದ್ದರು.