ಬೆಂಗಳೂರು: ಭೂ ಸ್ವಾಧೀನ ಪ್ರಕ್ರಿಯೆಯಿಂದ ನರ್ಸರಿಗಳಿಗೆ ವಿನಾಯ್ತಿ ನೀಡುವ ಕುರಿತು ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಬೆಂಗಳೂರಿನ ಡಾ.ಕೆ.ಶಿವರಾಮ ಕಾರಂತ ಬಡಾವಣೆಯಲ್ಲಿ ನರ್ಸರಿ ಹೊಂದಿದ್ದ ಬಿ.ಸತ್ಯನಾರಾಯಣಾಚಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ .ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.
ಅಲ್ಲದೇ, ಈ ಕುರಿತಂತೆ ಸಂಬಂಧಿಸಿದ ಪ್ರಾಧಿಕಾರಗಳು ಭೂ ಸ್ವಾಧೀನ ಪ್ರಕ್ರಿಯೆಯಿಂದ ನರ್ಸರಿಗಳನ್ನು ಹೊರಗಿಡಬೇಕಾದರೆ ಅಥವಾ ವಿನಾಯ್ತಿ ನೀಡಬೇಕಾದರೆ, ಅದಕ್ಕೆ ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು ಮತ್ತು ಆ ನಿಯಮಗಳು ಮೂಲ ಕಾನೂನಿಗೆ ವಿರುದ್ಧವಾಗಿರಬಾರದು ಎಂದು ಪೀಠ ತಿಳಿಸಿದೆ.
ಸರ್ಕಾರ 1987ರಲ್ಲಿ ನರ್ಸರಿಗಳನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಹೊರಗಿಟ್ಟು ಆದೇಶ ಹೊರಡಿಸಲಾಗಿದೆ ಎಂದು ಸುಮ್ಮನೆ ಕುಳಿತರೆ ಸಾಲದು, ಅದು ಆ ಸರ್ಕಾರಿ ಆದೇಶದ ಮೇಲೆ ಅವಲಂಬನೆಯನ್ನು ತಕ್ಷಣದಿಂದಲೇ ನಿಲ್ಲಿಸಬೇಕು ಎಂದೂ ಸಹ ಆದೇಶಿಸಿದೆ. ಸರ್ಕಾರ ಈ ಹಿಂದೆ ಹೊರಡಿಸಿರುವ ಆದೇಶಕ್ಕೆ ಯಾವುದೇ ಶಾಸನದ ಬೆಂಬಲವಿಲ್ಲ. ಆದ್ದರಿಂದ ಸ್ವಾಧೀನ ಪ್ರಾಧಿಕಾರಗಳು ನರ್ಸರಿಗಳನ್ನು ಗುರುತಿಸಿ ಅವುಗಳಿಗೆ ಸ್ವಾಧೀನ ಪ್ರಕ್ರಿಯೆಯಿಂದ ವಿನಾಯ್ತಿ ನೀಡಬೇಕಾದರೆ ತಕ್ಷಣವೇ ನಿಯಮಗಳನ್ನು ರೂಪಿಸಬೇಕಾಗುತ್ತದೆ. ಅದರ ವ್ಯಾಪ್ತಿಗೆ ಎಲ್ಲ ತೋಟಗಾರಿಕಾ ನರ್ಸರಿಗಳು ಒಳಪಡುವಂತಾಗಬೇಕು. ಸದ್ಯ ಕರ್ನಾಟಕದಲ್ಲಿ ನರ್ಸರಿಗಳಿಗೆ ಸಂಬಂಧಿಸಿದಂತೆ ಯಾವುದೇ ನಿಯಮಗಳಿಲ್ಲ. ಹಾಗಾಗಿ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯಲ್ಲಿ ನರ್ಸರಿಗಳಿಗೆ ಮಾನ್ಯತೆ ನೀಡುವಂತೆ ರಾಜ್ಯದಲ್ಲೂ ಸಹ ವ್ಯವಸ್ಥೆ ಕೈಗೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯ ಆದೇಶಿಸಿದೆ.