ಬೆಂಗಳೂರು:ಬಾಲಿವುಡ್ ಗಾಯಕ ಮಕ್ಸೂದ್ ಅಲಿ ಅಲಿಯಾಸ್ ಲಕ್ಕಿ ಅಲಿ ಮತ್ತು ಅವರ ಬೆಂಬಲಿಗ ಬೆಂಗಳೂರಿನ ವಾಸುದೇವಪುರದಲ್ಲಿರುವ (ಕೆಂಚೇನಹಳ್ಳಿ) ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಗಿಡಗಳನ್ನು ನಾಶಪಡಿಸುವ ಮೂಲಕ ಸುಮಾರು 75 ಲಕ್ಷ ರೂ. ನಷ್ಟ ಉಂಟು ಮಾಡಿದ ಆರೋಪದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಅತ್ತೆ ದಾಖಲಿಸಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ವಿಧಿಸಿದೆ.
ಗಾಯಕ ಲಕ್ಕಿ ಅಲಿ ಮತ್ತು ಬೆಂಗಳೂರಿನ ಮೈಲಪ್ಪನಹಳ್ಳಿಯ ಶ್ರೀನಿವಾಸ್ ಎಂಬವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು, ''ದೂರುದಾರೆಯಾದ ಬುಜ್ಜಮ್ಮ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಅತ್ತೆ. ಹೀಗಾಗಿ, ಪೊಲೀಸರು ಲಕ್ಕಿ ಅಲಿ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಲಕ್ಕಿ ಅಲಿ ಅವರಿಗೆ ಸೇರಿದ ಟ್ರಸ್ಟ್ ಹೆಸರಿನಲ್ಲಿ 87 ಎಕರೆ ಆಸ್ತಿ ಇದೆ. ಇದರ ಸಮೀಪದಲ್ಲೇ ರೋಹಿಣಿ ಅವರ ಪತಿ ಜಿ.ಸುಧೀರ್ ರೆಡ್ಡಿ ಅವರು ಲಕ್ಕಿ ಅಲಿ ಸಹೋದರನಿಂದ ಆಸ್ತಿ ಖರೀದಿಸಲಾಗಿದೆ ಎಂದು ಹೇಳುತ್ತಿದಾರೆ. ಈ ಸಂಬಂಧ 2016ರಿಂದ ರೋಹಿಣಿ ಅವರ ಪತಿ ಜಿ.ಸುಧೀರ್ ರೆಡ್ಡಿ ಮತ್ತು ಲಕ್ಕಿ ಅಲಿ ಅವರ ನಡುವೆ ಸಿವಿಲ್ ದಾವೆ ನಡೆಯುತ್ತಿದೆ'' ಎಂದು ತಿಳಿಸಿದರು.
''ಬುಜ್ಜಮ್ಮ ಅವರ ಸೊಸೆಯಾಗಿರುವ ರೋಹಿಣಿ ಸಿಂಧೂರಿ ಅವರು ಅಧಿಕಾರ ಬಳಸಿ ಕಿರುಕುಳ ನೀಡುತ್ತಿದ್ದಾರೆ. ಖಾಸಗಿ ದಾರಿಯನ್ನು ಸಾರ್ವಜನಿಕ ಹಾದಿ ಎಂದು ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಗೇಟ್ ಬೀಗ ತೆಗೆಯಬೇಕು ಎಂದು ಬೆದರಿಕೆ ಹಾಕುತ್ತಿದ್ದಾರೆ. ಪೊಲೀಸರು ಖಾಸಗಿ ವಾಹನದಲ್ಲಿ ಬಂದು ಬೆದರಿಕೆ ಹಾಕುತ್ತಿದ್ದಾರೆ. ಈ ಸಂಬಂಧ ಸಿಸಿಟಿವಿ ವಿಡಿಯೋ ಸಹ ನಮ್ಮ ಬಳಿ ಇದೆ'' ಎಂದು ಪೀಠಕ್ಕೆ ವಿವರಿಸಿದರು.