ಬೆಂಗಳೂರು:ಉದ್ಯೋಗದ ಸ್ಥಳದಲ್ಲಿ ಪ್ರಾಧ್ಯಾಪಕರೊಬ್ಬರಿಗೆ ಜಾತಿ ಆಧರಿಸಿ ತಾರತಮ್ಯ ಮಾಡಿದ ಆರೋಪ ಸಂಬಂಧ ಬೆಂಗಳೂರಿನ ಭಾರತೀಯ ವ್ಯವಸ್ಥಾಬಂಧ ಸಂಸ್ಥೆ (ಐಐಎಂ-ಬಿ) ನಿರ್ದೇಶಕ ರಿಷಿಕೇಶ್ ಟಿ. ಕೃಷ್ಣನ್ ಹಾಗೂ ಇತರೆ ಏಳು ಮಂದಿಯ ವಿರುದ್ಧ ಎಫ್ಐಆರ್ಗೆ ಹೈಕೋರ್ಟ್ ತಡೆ ನೀಡಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ ಐಐಎಂಬಿ ಮಾರ್ಕೆಟಿಂಗ್ ವಿಭಾಗದ ಪ್ರಾಧ್ಯಾಪಕ ಗೋಪಾಲ್ ದಾಸ್ ನೀಡಿದ ದೂರು ಆಧರಿಸಿ ಮೈಕೋ ಲೇಔಟ್ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಐಐಎಂಬಿ ನಿರ್ದೇಶಕ ರಿಷಿಕೇಶ್ ಟಿ. ಕೃಷ್ಣನ್, ಡೀನ್ ದಿನೇಶ್ ಕುಮಾರ್ ಸೇರಿದಂತೆ ಎಂಟು ಮಂದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಪೀಠ ಈ ಮಧ್ಯಂತರ ಆದೇಶ ಮಾಡಿದೆ.
ಅರ್ಜಿ ಸಂಬಂಧ ಮೈಕೋ ಲೇಔಟ್ ಠಾಣಾ ಪೊಲೀಸರು ಮತ್ತು ದೂರುದಾರ ಗೋಪಾಲ್ ದಾಸ್‌ಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ. ಪರಿಶಿಷ್ಟ ಜಾತಿಗೆ ಸೇರಿದ ಐಐಎಂ-ಬಿ ಮಾರ್ಕೆಂಟಿಂಗ್ ವಿಭಾಗದ ಸಹ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಗೋಪಾಲ್ ದಾಸ್ 2024ರ ಡಿ.20ರಂದು ಮೈಕೋ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಐಐಎಂಬಿ ನಿರ್ದೇಶಕ ರಿಷಿಕೇಶ್ ಕೃಷ್ಣನ್, ಡೀನ್ ದಿನೇಶ್ ಕುಮಾರ್ ಸೇರಿ ಐಐಎಂಬಿಯ ಒಟ್ಟು 8 ಮಂದಿ ಉದ್ದೇಶಪೂರ್ವಕವಾಗಿ ನನ್ನ ಜಾತಿಯನ್ನು ಪ್ರಚಾರ ಮಾಡುತ್ತಿದ್ದಾರೆ. ಕೆಲಸದ ವಾತಾವರಣದಲ್ಲಿ ಸಮಾನ ಅವಕಾಶವನ್ನು ನೀಡದೆ ಜಾತಿ ಭೇದ-ವೈಷಮ್ಯ ಮಾಡುತ್ತಾ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಕೆಲಸದ ಸ್ಥಳದಲ್ಲಿ ಅಡಚಣೆ ಉಂಟು ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು.