ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ನಟ ದರ್ಶನ್ ಜೊತೆ ಜೈಲಿನ ಒಳಾವರಣದಲ್ಲಿ ಕುಳಿತು ಧೂಮಪಾನ ಮಾಡಿದ ಆರೋಪದಡಿ ಕೈದಿ ಶ್ರೀನಿವಾಸ್ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.
ಶ್ರೀನಿವಾಸ್ ಅಲಿಯಾಸ್ ಕುಳ್ಳ ಸೀನ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕರಣದ ವಿಚಾರಣೆಗೆ ತಡೆ ನೀಡಿ ಆದೇಶಿಸಿತು.
ಅರ್ಜಿದಾರರ ಪರ ವಕೀಲರ ವಾದವೇನು?:ವಿಚಾರಣೆ ವೇಳೆ ಅರ್ಜಿದಾರ ಶ್ರೀನಿವಾಸ್ ಪರ ವಾದ ಮಂಡಿಸಿದ ವಕೀಲರು, ''ಆರೋಪಗಳಿಗೂ ಮತ್ತು ದೂರಿನಲ್ಲಿ ದಾಖಲಿಸಿರುವ ಕಲಂಗಳಿಗೂ ತಾಳೆಯಾಗುವುದಿಲ್ಲ. ಅಂತೆಯೇ, ಜೈಲುಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ ಎಂದು ಒಂದು ಕಡೆ ಹೇಳಿದರೆ, ಮತ್ತೊಂದೆಡೆ ಧೂಮಪಾನಕ್ಕೆ ಪ್ರತ್ಯೇಕ ಜಾಗದ ಅವಕಾಶ ಕಲ್ಪಿಸಲಾಗಿದೆ ಎಂಬ ತದ್ವಿರುದ್ಧ ನಿಯಮ ಜಾರಿಯಲ್ಲಿವೆ. ಈ ಪ್ರಕರಣದಲ್ಲಿ ಅರ್ಜಿದಾರರು ಯಾವುದೇ ಧೂಮಪಾನ ಮಾಡುತ್ತಿರಲಿಲ್ಲ. ಹೀಗಾಗಿ, ಇವರ ವಿರುದ್ಧದ ಎಫ್‌ಐಆರ್ ಮತ್ತು ವಿಚಾರಣಾ ನ್ಯಾಯಾಲಯದಲ್ಲಿನ ನ್ಯಾಯಿಕ ಪ್ರಕ್ರಿಯೆಗೆ ತಡೆ ನೀಡಬೇಕು'' ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ವಾದ ಆಲಿಸಿದ ಪೀಠ, ಪ್ರಕರಣಕ್ಕೆ ತಡೆ ನೀಡಿ ವಿಚಾರಣೆ ಮುಂದೂಡಿತು.