ಬೆಂಗಳೂರು:ಕೊಡವರಿಗೆ ಪ್ರತ್ಯೇಕ ಸ್ಥಾನಮಾನ ನೀಡುವ ಕುರಿತಂತೆ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಪ್ರತಿವಾದಿಗಳಾಗಿ ಸೇರ್ಪಡೆಯಾಗಿರುವ ಕೊಡವ ಸಮಾಜ ಸೇರಿ ಇತರರು ತಮ್ಮ ಲಿಖಿತ ವಾದ ಸಲ್ಲಿಸುವಂತೆ ಸೂಚಿಸಿರುವ ಹೈಕೋರ್ಟ್, ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ನಿಗದಿಪಡಿಸಿತು.
ಕೊಡವರಿಗೆ ಪ್ರತ್ಯೇಕ ಸ್ಥಾನಮಾನಕ್ಕಾಗಿ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಲ್ಲಿಸಿರುವ ಮನವಿ ಪರಿಗಣಿಸಬೇಕು ಹಾಗೂ ಈ ಸಂಬಂಧ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಕಾರ್ಯ ನಿರ್ವಹಿಸುವ ಪ್ರತ್ಯೇಕ ಆಯೋಗ ರಚಿಸಲು ನಿರ್ದೇಶನ ನೀಡುವಂತೆ ಕೋರಿ ಬಿಜೆಪಿ ಮುಖಂಡ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಅರ್ಜಿ ಸೋಮವಾರ ವಿಚಾರಣೆಗೆ ಬಂದಿತ್ತು. ಈ ವೇಳೆ, ಈ ಹಿಂದೆ ವಿಚಾರಣೆ ವೇಳೆ ಕೊಡವ ಸಮಾಜವನ್ನು ಅರ್ಜಿದಾರರನಾಗಿ ಮಾಡುವುದಕ್ಕೆ ಅವಕಾಶ ನೀಡಿ ಆದೇಶಿಸಿತ್ತು. ಆದರೆ, ಈ ಆದೇಶವನ್ನು ಹಿಂಪಡೆದ ನ್ಯಾಯಪೀಠ, ಕೊಡವ ಸಮಾಜವನ್ನು ಪ್ರತಿವಾದಿಗಳನ್ನಾಗಿಸಿ ಅವರ ವಾದವನ್ನು ಆಲಿಸುವುದಾಗಿ ತಿಳಿಸಿದೆ.
''ಅಲ್ಲದೆ, ಮುಂದಿನ ವಿಚಾರಣೆ ವೇಳೆ ಪ್ರಕರಣದ ಎಲ್ಲ ಭಾಗೀದಾರರು ತಮ್ಮ ಲಿಖಿತ ವಾದವನ್ನು ಮಂಡಿಸಬೇಕು'' ಎಂದು ಸೂಚನೆ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿತು.
''ಕೊಡವರಿಗೆ ಪ್ರತ್ಯೇಕ ಸ್ಥಾನ ನೀಡುವ ಕುರಿತಂತೆ ನಮ್ಮ ಆಕ್ಷೇಪವಿದೆ'' ಎಂದು ಸರ್ಕಾರದ ಪರ ವಕೀಲರು ವಿವರಿಸಿದರು.
ಈ ವೇಳೆ ಅರ್ಜಿದಾರರೇ ಆದ ಸುಬ್ರಮಣಿಯನ್ ಸ್ವಾಮಿ, ''ಅರ್ಜಿಯಲ್ಲಿನ ಮನವಿಯನ್ನು ಪರಿಗಣಿಸಿದರೆ ಸರ್ಕಾರ ಸೇರಿದಂತೆ ಯಾರಿಗೂ ತೊಂದರೆಯಾಗುವುದಿಲ್ಲ. ಸರ್ಕಾರ ಆಕ್ಷೇಪಿಸುವುದಾಗಿ ತಿಳಿಸುತ್ತಿದ್ದು, ಇದರಿಂದ ಸರ್ಕಾರಕ್ಕೆ ಏನಾದರೂ ಬೆದರಿಕೆ ಇದೆಯೆ'' ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ''ವಿಚಾರಣೆ ನಡೆಯಲಿ. ಬಳಿಕ ನಿರ್ಧಾರ ಕೈಗೊಳ್ಳಲಾಗುವುದು'' ಎಂದು ತಿಳಿಸಿತು.
ಕೇಂದ್ರದ ಪರ ವಾದಿಸಿದ ಪ್ರಶಾಂತ್ ಭೂಷಣ್, ''ಕೊಡವ ಜನಾಂಗದವರಿಗೆ ಶಸ್ತ್ರಾಸ್ತ್ರ ನೀಡಬೇಕು ಎಂದು ಕೋರಿರುವ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ'' ಎಂದು ಪೀಠಕ್ಕೆ ವಿವರಿಸಿದರು.
ಈ ವೇಳೆ ಸುಬ್ರಮಣಿಯನ್ ಸ್ವಾಮಿ, ''ಶಸ್ತ್ರಾಸ್ತ್ರ ನೀಡುವುದು ಹಾಗೂ ಪ್ರತ್ಯೇಕ ಸ್ಥಾನಮಾನ ನೀಡುವ ವಿಚಾರಕ್ಕೆ ಒಂದಕ್ಕೊಂದು ಸಂಬಂಧವಿಲ್ಲ. ಅದು ಬೇರೆ, ನಮ್ಮ ಮನವಿ ಬೇರೆ ವಿಚಾರ'' ಎಂದು ಮಾಹಿತಿ ನೀಡಿದರು. ಅಂತಿಮವಾಗಿ ಪೀಠ ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ಮುಂದೂಡಿತು.
ಈ ಹಿಂದೆ ನಡೆದ ವಿಚಾರಣೆ ವೇಳೆ, ''ಇದೇ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಿಸಿ ಕೊಡಗು ಜಿಲ್ಲೆಯ ಮೂಲ ನಿವಾಸಿ ಎಸ್ಸಿ, ಎಸ್ಟಿ, ಬುಡಕಟ್ಟು ಹಾಗೂ ಆದಿವಾಸಿ ಸಮುದಾಯಗಳು ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ಪರಿಗಣಿಸಿದರೆ, ಕೊಡಗು ಜಿಲ್ಲೆಯ ಮೂಲ ನಿವಾಸಿ ಬುಡಕಟ್ಟು ಜನಾಂಗಗಳ ಬದುಕು ಮತ್ತು ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಗಿದ್ದರೂ, ಒಂದು ಸೀಮಿತ ಜಾತಿಗೆ ಲಾಭ ಉಂಟುಮಾಡಲಿದೆ. ಹೀಗಾಗಿ, ಅರ್ಜಿ ಪರಿಗಣಿಸಬಾರದು'' ಎಂದು ಕೋರಿದ್ದರು.
ಇದನ್ನೂ ಓದಿ:ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದೆ: ಹೈಕೋರ್ಟ್‌ಗೆ ಸರ್ಕಾರ ಮಾಹಿತಿ - Shiruru hill collapse