ಕರ್ನಾಟಕ

karnataka

ETV Bharat / state

ಬೆಂಗಳೂರು ನೀರು ಪೂರೈಕೆ, ಒಳಚರಂಡಿ ಶುಲ್ಕ ಸಂಗ್ರಹ ಕಾನೂನು ಬಾಹಿರ, ವಾಪಸ್ ನೀಡಿ: ಹೈಕೋರ್ಟ್ - GBWSSP Fee - GBWSSP FEE

ಗ್ರೇಟರ್ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಯೋಜನಾ ಶುಲ್ಕ ಸಂಗ್ರಹ ಮಾಡುವುದು ಕಾನೂನು ಬಾಹಿರ ಎಂದು ಹೈಕೋರ್ಟ್ ತಿಳಿಸಿದೆ.

high-court-says-greater-bengaluru-water-supply-and-sewerage-project-fee-collection-is-illegal
ಬೆಂಗಳೂರು ನೀರು ಪೂರೈಕೆ, ಒಳಚರಂಡಿ ಶುಲ್ಕ ಸಂಗ್ರಹ ಕಾನೂನುಬಾಹಿರ, ವಾಪಸ್ ನೀಡಿ: ಹೈಕೋರ್ಟ್

By ETV Bharat Karnataka Team

Published : Apr 12, 2024, 9:10 AM IST

ಬೆಂಗಳೂರು:ಬೆಂಗಳೂರು ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಕಳೆದ ಕೆಲವು ವರ್ಷಗಳಿಂದ ವಸತಿ ಕಟ್ಟಡಗಳಿಂದ ಅವುಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಸಂಗ್ರಹ ಮಾಡುತ್ತಿರುವ ಗ್ರೇಟರ್ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಯೋಜನಾ ಶುಲ್ಕ (ಜಿಬಿಡಬ್ಲೂಎಸ್‌ಎಸ್​ಪಿ) ಮತ್ತು ಬೆನಿಫಿಶಿಯರಿ ಕ್ಯಾಪಿಟಲ್ ಕಾಂಟ್ರಿಬ್ಯೂಷನ್ (ಬಿಸಿಸಿ) ಶುಲ್ಕಗಳನ್ನು ಕಾನೂನುಬಾಹಿರ ಎಂದು ಹೈಕೋರ್ಟ್ ಹೇಳಿದೆ.

ರಿಯಲ್ ಎಸ್ಟೇಟ್ ಸಂಸ್ಥೆ ಶೋಭಾ ಲಿಮಿಟೆಡ್ ಮತ್ತು ಬ್ರಿಗೇಡ್ ಎಂಟರ್‌ಪ್ರೈಸಸ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿತು. ಅಲ್ಲದೇ, ಜಿಬಿಡಬ್ಲೂಎಸ್‌ಎಸ್​​​ಪಿ ಹಾಗೂ ಬಿಸಿಸಿ ಶುಲ್ಕವನ್ನು ಜಲಮಂಡಳಿ ಸಂಗ್ರಹ ಮಾಡುತ್ತಿದೆ. ಆದರಿಂದ ಬಂದ ಹಣವನ್ನು ಮಂಡಳಿ ಹೊಸ ಪ್ರದೇಶಗಳಿಗೆ ನೀರು ಪೂರೈಕೆ ಹಾಗೂ ಒಳಚರಂಡಿ ವ್ಯವಸ್ಥೆ ಒದಗಿಸಲು ಮೂಲಸೌಕರ್ಯಕ್ಕಾಗಿ ಬಳಕೆ ಮಾಡುತ್ತಿದೆ. ಆದರೆ, ಯಾವುದೇ ಶಾಸನಾತ್ಮಕ ಬೆಂಬಲ ಇಲ್ಲದೇ, ಆ ರೀತಿ ಶುಲ್ಕಗಳನ್ನು ವಿಧಿಸುವ ಅಧಿಕಾರ ಮಂಡಳಿಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಆದರೆ, ರಾಜ್ಯ ಸರ್ಕಾರ ಅಥವಾ ಬೆಂಗಳೂರು ಜಲಮಂಡಳಿ, ಈ ಎರಡು ಶುಲ್ಕಗಳನ್ನು ವಿಧಿಸಲು ಬೆಂಗಳೂರು ನೀರು ಮತ್ತು ಒಳಚರಂಡಿ ಕಾಯ್ದೆ 1964 ಮತ್ತು ಬೆಂಗಳೂರು ನೀರು ಪೂರೈಕೆ ರೆಗ್ಯುಲೇಷನ್ಸ್ 1965 ಅಡಿ ಸೂಕ್ತ ತಿದ್ದುಪಡಿಗಳನ್ನು ಮಾಡಿ, ಆನಂತರ ಮುಂದಿನ ಕ್ರಮ ಜರುಗಿಸಬಹುದಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.

ಜೊತೆಗೆ, ಜಲಮಂಡಳಿಗೆ ತನ್ನದೇ ಆದ ಸಾಮಾನ್ಯ ಕರ್ತವ್ಯಗಳಿವೆ. ಅದರಲ್ಲಿ ಅತ್ಯಂತ ಪ್ರಮುಖ ಕಾರ್ಯ ಎಂದರೆ ಕೊಳವೆ ಪೈಪ್​ಗಳನ್ನು ಅಳವಡಿಸುವುದು. ಅದಕ್ಕಾಗಿ ಶುಲ್ಕ ವಿಧಿಸುವಂತಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ. ಆದರೆ, ಪ್ರೊರೇಟಾ ಶುಲ್ಕ ಸಂಗ್ರಹ ಮಾಡುವ ಜಲಮಂಡಳಿ ಅಧಿಕಾರವನ್ನು ನ್ಯಾಯಾಲಯ 2004ರಲ್ಲಿಯೇ ಎತ್ತಿ ಹಿಡಿದಿದೆ. ಜಲಮಂಡಳಿ ಕಾಯ್ದೆಯಲ್ಲಿಯೇ ಆ ಶುಲ್ಕಗಳ ಸಂಗ್ರಹಕ್ಕೆ ಅನುವು ಮಾಡಿಕೊಟ್ಟಿರುವುದರಿಂದ ಅವು ಕಾನೂನುಬದ್ಧವಾಗಿವೆ ಎಂದು ಪೀಠ ತಿಳಿಸಿದೆ.

ಅಲ್ಲದೆ, ಜಲಮಂಡಳಿ ಹಾಲಿ ಬಹುಮಹಡಿಗಳಿಂದ ಸಂಗ್ರಹ ಮಾಡುತ್ತಿರುವ ಮುಂಗಡ ಪ್ರೊರೇಟಾ ಶುಲ್ಕ ಮತ್ತು ಕಟ್ಟಡಗಳ ನಿರ್ಮಾಣಕ್ಕಾಗಿ ಸಂಸ್ಕರಿತ ನೀರು ಶುಲ್ಕ ಸಂಗ್ರಹವನ್ನು ಎತ್ತಿ ಹಿಡಿದಿದೆ. ಅರ್ಜಿದಾರರಿಂದ ಸಂಗ್ರಹಿಸಿರುವ ಗ್ರೇಟರ್ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಯೋಜನಾ ಶುಲ್ಕವನ್ನು ವಾಪಸ್ ನೀಡುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಅರ್ಜಿದಾರರಿಗೆ ಶುಲ್ಕ ವಾಪಸ್:ಇದೇ ವೇಳೆ ನ್ಯಾಯಾಲಯ, ಅರ್ಜಿದಾರರು ಈಗಾಗಲೇ ಜಲಮಂಡಳಿಗೆ ಪಾವತಿ ಮಾಡಿರುವ ಬಿಸಿಸಿ ಶುಲ್ಕ ಮತ್ತು ಜಿಬಿಡಬ್ಲೂಎಸ್‌ಎಸ್​​​ಪಿ ಶುಲ್ಕವನ್ನು ವಾಪಸ್ ಪಡೆಯಲು ಅರ್ಹರಾಗಿದ್ದಾರೆ. ಜಲಮಂಡಳಿ ಅವರಿಗೆ 12 ವಾರದಲ್ಲಿ ಹಣ ಮರುಪಾವತಿ ಮಾಡಬೇಕು ಎಂದು ಆದೇಶ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಜಲಮಂಡಳಿ ಯಾವುದೇ ಕಾನೂನಾತ್ಮಕ ಬೆಂಬಲ ಇಲ್ಲದೇ ಎಲ್ಲ ವಸತಿ ಸಮುಚ್ಛಯಗಳ ಮಾಲೀಕರಿಂದ ಗ್ರೇಟರ್ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಯೋಜನಾ ಶುಲ್ಕ (ಜಿಬಿಡಬ್ಲೂಎಸ್‌ಎಸ್​​ಪಿ) ಮತ್ತು ಬೆನಿಫಿಶಿಯರಿ ಕ್ಯಾಪಿಟಲ್ ಕಾಂಟ್ರಿಬ್ಯೂಷನ್ (ಬಿಸಿಸಿ) ಶುಲ್ಕಗಳನ್ನು ಕಾನೂನು ಬಾಹಿರ. ಹಾಗಾಗಿ ಅವುಗಳನ್ನು ರದ್ದುಗೊಳಿಸಬೇಕು. ಆ ರೀತಿ ಶುಲ್ಕ ವಿಧಿಸುವುದು ಸಂವಿಧಾನದ ಕಲಂ 265ಕ್ಕೆ ವಿರುದ್ಧವಾದದು'' ಎಂದು ಆಕ್ಷೇಪ ಎತ್ತಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಜಲಮಂಡಳಿ, ''ತನಗೆ ಮುಂಗಡ ಪ್ರೊರೇಟಾ ಶುಲ್ಕ ಮತ್ತು ಕಟ್ಟಡಗಳ ನಿರ್ಮಾಣಕ್ಕಾಗಿ ಸಂಸ್ಕರಿತ ನೀರು ಶುಲ್ಕ ಸಂಗ್ರಹಕ್ಕೆ ಮಾತ್ರವಲ್ಲದೇ ಜಿಬಿಡಬ್ಲೂಎಸ್‌ಎಸ್​​ಪಿ ಮತ್ತು ಬಿಸಿಸಿ ಶುಲ್ಕಗಳನ್ನು ಸಂಗ್ರಹಿಸಲು ಅಧಿಕಾರವಿದೆ. ಆ ಶುಲ್ಕಗಳನ್ನು ಪಾವತಿಸಿದ ನಂತರವಷ್ಟೇ ಎನ್​​ಒಸಿ ನೀಡಲಾಗುತ್ತಿದೆ'' ಎಂದು ವಾದ ಮಂಡಿಸಿತ್ತು.

ಇದನ್ನೂ ಓದಿ:ಬೆಂಗಳೂರು ವಿವಿ ಕೇಂದ್ರ ಗ್ರಂಥಾಲಯದ ಸಮಯ ವಿಸ್ತರಣೆ: ವಿದ್ಯಾರ್ಥಿಗಳ ಬಹುದಿನದ ಬೇಡಿಕೆಗೆ ಸ್ಪಂದನೆ

ABOUT THE AUTHOR

...view details