ಬೆಂಗಳೂರು :ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧೀಕ್ಷಕರಿಗೆ ಆಸ್ಪತ್ರೆಯ ಒಂದು ವಿಭಾಗದ ಮುಖ್ಯಸ್ಥರು ಎಚ್ಒಡಿ ಯಾಗಿ ಹೆಚ್ಚುವರಿ ಹೊಣೆ ನೀಡುವಂತಿಲ್ಲ ಎಂದು ಹೈಕೋರ್ಟ್ ಆದೇಶ ತಿಳಿಸಿದೆ. ಡಾ. ಎಸ್. ಶ್ರೀಧರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ. ಅಲ್ಲದೇ, ಶಿವಮೊಗ್ಗ ವೈದ್ಯಕೀಯ ಕಾಲೇಜಿನ ಟಿ.ಡಿ. ತಿಮ್ಮಪ್ಪ ಅವರನ್ನು ಎಚ್ಒಡಿಯನ್ನಾಗಿ ನೇಮಕ ಮಾಡಿರುವುದನ್ನು ಅಕ್ರಮ ಹಾಗೂ ಕಾನೂನು ಬಾಹಿರ ಎಂದು ರದ್ದುಗೊಳಿಸಿದೆ. ಮೂರನೇ ಪ್ರತಿವಾದಿಯಾಗಿರುವ ಟಿ.ಡಿ.ತಿಮ್ಮಪ್ಪ ರಾಷ್ಟ್ರೀಯ ವೈದ್ಯಕೀಯ ನಿಯಮಗಳಿಗೆ ವಿರುದ್ಧವಾಗಿ ಇಎನ್ಟಿ ವಿಭಾಗದ ಎಚ್‌ಒಡಿ ಆಗಿ ಹೆಚ್ಚುವರಿ ಹೊಣೆಗಾರಿಕೆಗಳನ್ನು ನಿರ್ವಹಿಸುವಂತಿಲ್ಲ ಎಂದು ಆದೇಶ ನೀಡಿದೆ. ವೈದ್ಯಕೀಯ ಕಾಲೇಜು ಎನ್ಎಂಸಿ ನಿಯಮದಂತೆ ಆಡಳಿತಾತ್ಮಕ ಮತ್ತು ಕ್ಲಿನಿಕಲ್ ಪಾತ್ರಗಳನ್ನು ಪ್ರತ್ಯೇಕವಾಗಿ ನಿರ್ವಹಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.
ವೈದ್ಯಕೀಯ ಅಧೀಕ್ಷಕರಾಗಿ ಆಸ್ಪತ್ರೆಯ ಆಡಳಿತಾತ್ಮಕ ಕೆಲಸದ ಜತೆಗೆ ಬಜೆಟ್, ಸಿಬ್ಬಂದಿ, ಸೌಕರ್ಯಗಳು ಸೇರಿ ಒಟ್ಟಾರೆ ಆಸ್ಪತ್ರೆಯ ಕೆಲಸ ಕಾರ್ಯಗಳ ಮೇಲ್ವಿಚಾರಣೆ ನಡೆಸಬೇಕಾಗುತ್ತದೆ. ಅಂತಹವರಿಗೆ ಇಎನ್ಟಿ ವಿಭಾಗದ ಹೆಚ್ಚುವರಿ ಹೊಣೆ ವಹಿಸಿದರೆ ಆಗ ಸರ್ಜರಿ, ವೈದ್ಯಕೀಯ ಚಿಕಿತ್ಸೆ ಸೇರಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಹಾಗಾಗಿ ಎರಡೂ ಹುದ್ದೆಗಳನ್ನು ಒಬ್ಬರೇ ಸಮರ್ಪಕವಾಗಿ ನಿರ್ವಹಿಸಲಾಗದು. ಹಾಗಾಗಿ ಆದೇಶವನ್ನು ರದ್ದುಗೊಳಿಸುತ್ತಿರುವುದಾಗಿ ನ್ಯಾಯಪೀಠ ಹೇಳಿದೆ.