ಬೆಂಗಳೂರು:ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ.
ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಆದೇಶ ಕಾಯ್ದಿರಿಸಿದೆ. ಅಲ್ಲದೇ, ಪ್ರಕರಣ ಸಂಬಂಧ ಈ ಹಿಂದೆ ವಿಧಿಸಿರುವ ತಡೆಯಾಜ್ಞೆ ವಿಸ್ತರಿಸಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ರಾಹುಲ್‌ಗಾಂಧಿ ವಿದೇಶದಲ್ಲಿ ಕೆಲವು ಹೇಳಿಕೆಗಳನ್ನು ನೀಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಯಾಗಿ ಅರ್ಜಿದಾರರು ಹೇಳಿಕೆ ನೀಡಿದ್ದಾರೆ. ಆದರೆ, ಪ್ರಕರಣ ಸಂಬಂಧ ದಾಖಲಾಗಿದ್ದ ಎಫ್‌ಐಆರ್‌ನಲ್ಲಿರುವ ಯಾವುದೇ ಆರೋಪ ಸಂಬಂಧಿತ ಅಂಶಗಳು ಇಲ್ಲ. ನಮ್ಮ ಕಕ್ಷಿದಾರರ ಹೇಳಿಕೆಗೆ ಸಂಬಂಧಿಸಿದಂತೆ ಅಸಮಾಧಾನವಾಗಿದ್ದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಬಹುದಾಗಿದೆ. ಅದನ್ನು ಸಮರ್ಥನೆ ಮಾಡಿಕೊಳ್ಳಲಾಗುವುದು'' ಎಂದು ಪೀಠಕ್ಕೆ ವಿವರಿಸಿದರು.
ದೂರುದಾರ ಪರ ವಕೀಲರ ವಾದವೇನು?: ದೂರುದಾರ ಪರ ವಾದ ಮಂಡಿಸಿದ ವಕೀಲ ಸಂಕೇತ್ ಏಣಗಿ, ''ಆರೋಪಕ್ಕೆ ಸಂಬಂಧಿಸಿದಂತೆ ಎಲ್ಲ ಅಂಶಗಳನ್ನು ಎಫ್‌ಐಆರ್‌ನಲ್ಲಿ ವಿವರಿಸಿಲ್ಲ. ಆದರೆ, ಅರ್ಜಿದಾರರ ಹೇಳಿಕೆಗಳು ಮಹಿಳೆಯ ಘನತೆಗೆ ಧಕ್ಕೆ ಮಾಡುವಂತಹದ್ದಾಗಿವೆ. ರಾಹುಲ್ ಗಾಂಧಿ ಅವರ ತಾಯಿಯ ನಡತೆ ಕುರಿತಂತೆ ಮಾತನಾಡಿದ್ದಾರೆ. ಅಲ್ಲದೇ, ರಾಹುಲ್ ಗಾಂಧಿ ಕ್ರಿಶ್ಚಿಯನ್, ಮೊಘಲರು ಇಲ್ಲವೇ ಬ್ರಾಹ್ಮಣರಿಗೆ ಹುಟ್ಟಿದ್ದಾರೆಯೇ ಎಂಬುದಾಗಿ ಪ್ರಶ್ನಿಸಿದ್ದಾರೆ. ಈ ಹೇಳಿಕೆಯಿಂದ ಮಹಿಳೆಯ ಘಟನೆಗೆ ಧಕ್ಕೆಯಾಗುವಂತಾಗಿದೆ'' ಎಂದು ಪೀಠಕ್ಕೆ ತಿಳಿಸಿದರು.
''ಅರ್ಜಿದಾರರು, ಸಾಮಾನ್ಯ ವ್ಯಕ್ತಿಯಲ್ಲ. ಸುಶಿಕ್ಷತರಾಗಿದ್ದು, ಸಂಸದರು, ಶಾಸಕರು ಕೇಂದ್ರ ಸಚಿವರೂ ಆಗಿದ್ದಾರೆ. ಈ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಆದ್ದರಿಂದ ಎಫ್‌ಐಆರ್ ರದ್ದು ಮಾಡಬಾರದು. ತನಿಖೆ ನಡೆಸಿದಲ್ಲಿ ಸತ್ಯಾಂಶಗಳು ಹೊರಬರಲಿದೆ'' ಎಂದು ಕೋರಿದರು.