ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ಅವರ ಮಧ್ಯಂತರ ಜಾಮೀನು ಅರ್ಜಿಯ ಆದೇಶವನ್ನು ಇಂದು (ಬುಧವಾರ) ಪ್ರಕಟಿಸುವುದಾಗಿ ಹೈಕೋರ್ಟ್ ತಿಳಿಸಿದೆ. ಇಂದು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ ಜಾಮೀನು ಅರ್ಜಿ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ದರ್ಶನ್ ಪರ ವಾದ ಮಂಡಿಸಿದ ವಕೀಲ ಸಿ.ವಿ.ನಾಗೇಶ್, ಜೈಲಿನ ಅಧಿಕಾರಿಗಳು ನೀಡಿರುವ ವರದಿಯನ್ನು ಪೀಠಕ್ಕೆ ವಿವರಿಸಿ, ದರ್ಶನ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಳ್ಳಾರಿಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಸರ್ಕಾರಿ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕೇ ಎಂಬ ಬಗ್ಗೆ ಅನುಮತಿ ಪಡೆದುಕೊಳ್ಳಬೇಕಾದ ಅಗತ್ಯವಿಲ್ಲ ಎಂದರು.
ತನ್ನ ವೆಚ್ಚದಲ್ಲಿ ತನಗೆ ನಂಬಿಕೆ ಹೊಂದಿರುವ ವೈದ್ಯರಿಂದ ಚಿಕಿತ್ಸೆ ಪಡೆಯುವುದಕ್ಕೆ ಮುಕ್ತ ಅವಕಾಶವಿದೆ. ಸರ್ಕಾರದ ವೆಚ್ಚದಲ್ಲಿ ಅಲ್ಲ. ಇಂತಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂಬ ಅಂಶವನ್ನು ಪ್ರಾಸಿಕ್ಯೂಷನ್(ತನಿಖಾಧಿಕಾರಿಗಳು) ಪ್ರಶ್ನೆ ಮಾಡುವುದಕ್ಕೆ ಅವಕಾಶವಿಲ್ಲ. ವೈದ್ಯರ ಸೂಚನೆಯಂತೆ ಚಿಕಿತ್ಸೆಗೆ ಒಳಗಾಗದಿದ್ದಲ್ಲಿ ಮುಂದೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಅಲ್ಲದೆ, ಪ್ರಕರಣ ಸಂಬಂಧ ತನಿಖೆ ಪೂರ್ಣಗೊಂಡಿದ್ದು ಆರೋಪಪಟ್ಟಿಯನ್ನೂ ಸಲ್ಲಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಅರ್ಜಿದಾರರು ರೆಗ್ಯೂಲರ್ ಜಾಮೀನು ಕೇಳುತ್ತಿಲ್ಲ. ರೆಗ್ಯೂಲರ್ ಜಾಮೀನು ಕೋರಿರುವ ಅರ್ಜಿ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಪ್ರಸ್ತುತ ಆರೋಗ್ಯದ ದೃಷ್ಟಿಯಿಂದ ಮಧ್ಯಂತರ ಜಾಮೀನು ಕೋರುತ್ತಿದ್ದೇವೆ. ಈ ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಕೊಲೆ ಆರೋಪಿಯಾಗಿದ್ದರೂ, ಮ್ಯಾಜಿಸ್ಟ್ರೇಟ್ ನ್ಯಾಯಾಲಯವೂ ಜಾಮೀನು ಮಂಜೂರು ಮಾಡಬಹುದಾಗಿದೆ. ಹೀಗಾಗಿ ಮಧ್ಯಂತರ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.
ಅರ್ಜಿದಾರರಿಗೆ ಈ ಹಿಂದೆಯೂ ಸಮಸ್ಯೆ ಇದ್ದು, ಇದೀಗ ಸಮಸ್ಯೆ ಉಲ್ಬಣಗೊಂಡಿದೆ. ಈ ರೀತಿಯ ಆರೋಗ್ಯ ಸಮಸ್ಯೆ ಇರುವವರು ಮುಂದೆ ಪಾಶ್ವವಾಯು ಇಲ್ಲವೇ ನರ ಸಮಸ್ಯೆಗಳಿಗೆ ಗುರಿಯಾಗಬಹುದಾಗಿದ್ದು, ಅದನ್ನು ತಪ್ಪಿಸುವುದಕ್ಕೆ ಶಸ್ತ್ರಚಿಕಿತ್ಸೆ ಅತ್ಯಗತ್ಯ ಎಂದು ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಿಶೇಷ ಅಭಿಯೋಜಕ ಪಿ.ಪ್ರಸನ್ನಕುಮಾರ್, ಅರ್ಜಿದಾರರಿಗೆ ತಕ್ಷಣ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ ಎಂಬುದಾಗಿ ವೈದ್ಯರು ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೆ, ಅರ್ಜಿದಾರರ ಆರೋಗ್ಯ ಸಂಬಂಧ ವರದಿ ನೀಡಿರುವುದು ಸರಿಯೇ. ಆದರೆ, ಅವರ ಆರೋಗ್ಯಕ್ಕೆ ಮತ್ತೊಂದು ಪರೀಕ್ಷೆ ಸಂಬಂಧ ಅರ್ಜಿದಾರರನ್ನು ಬೆಂಗಳೂರಿಗೆ ಕರೆತಂದು, ನಗರದ ವಿಕ್ಟೋರಿಯಾ ಇಲ್ಲವೇ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಮಂಡಳಿಕೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪೀಠ, ಯಾವುದೇ ವ್ಯಕ್ತಿ ಒಮ್ಮೆ ಆರೋಗ್ಯ ಕಳೆದುಕೊಂಡರೆ ಅದನ್ನು ಜೀವನದಲ್ಲಿ ಸರಿಪಡಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಆರೋಗ್ಯ ಮತ್ತಷ್ಟು ಕೆಡಬೇಕು ಎಂಬುದಾಗಿ ಪ್ರಾಸಿಕ್ಯೂಷನ್ ನಿರೀಕ್ಷೆ ಮಾಡುವುದೇ ಎಂದು ಪ್ರಶ್ನಿಸಿತು.