ಕರ್ನಾಟಕ

karnataka

ETV Bharat / state

ನ್ಯಾಯಾಧೀಶರ ಕುರಿತು ಅವಹೇಳನಕಾರಿ ಪೋಸ್ಟ್​ ವಿಚಾರ; ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಣೆ - CONTEMPT OF JUDGE

ಉತ್ತರ ಪ್ರದೇಶದ ಜಿಲ್ಲಾ ನ್ಯಾಯಾಧೀಶರ ಬಗ್ಗೆ ಫೇಸ್​ಬುಕ್​ನಲ್ಲಿ ಅವಹೇಳನಕಾರಿ ಪೋಸ್ಟ್​ ಹಾಕಿದ್ದ ಆರೋಪದ ಮೇರೆಗೆ ರಾಮನಗರದ ವಕೀಲರೊಬ್ಬರ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್​ ನಿರಾಕರಿಸಿದೆ.

high-court
ಹೈಕೋರ್ಟ್ (ETV Bharat)

By ETV Bharat Karnataka Team

Published : Nov 12, 2024, 8:39 PM IST

ಬೆಂಗಳೂರು :ವಾರಾಣಸಿಯ ಜ್ಞಾನವ್ಯಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ಕಲ್ಪಿಸಿ, ತೀರ್ಪು ನೀಡಿದ್ದ ಉತ್ತರ ಪ್ರದೇಶದ ಜಿಲ್ಲಾ ನ್ಯಾಯಾಧೀಶರ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ ಆರೋಪದ ಮೇಲೆ ರಾಮನಗರದ ವಕೀಲ ಚಾನ್‌ ಪಾಷಾ ಐಜೂರ್‌ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ರಾಮನಗರ ಪಟ್ಟಣದ ಗೌಸಿಯಾ ನಗರ ನಿವಾಸಿಯಾದ ವಕೀಲ ಚಾನ್‌ ಪಾಷಾ ಐಜೂರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಆರೋಪಗಳನ್ನು ಕೈ ಬಿಡುವಂತೆ ಕೋರಿ ವಿಚಾರಣಾ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಬಹುದು. ಆದರೆ, ನಾನು(ಪೀಠ) ಎಫ್‌ಐಆರ್‌ ರದ್ದುಪಡಿಸುವುದಿಲ್ಲ. ಕೊನೆ ಪಕ್ಷ ಎಫ್‌ಐಆರ್‌ಗೆ ತಡೆಯಾಜ್ಞೆಯೂ ನೀಡುವುದಿಲ್ಲ ಎಂದು ಮೌಖಿಕವಾಗಿ ತಿಳಿಸಿ ಅರ್ಜಿ ಇತ್ಯರ್ಥಪಡಿಸಿದರು.

ಅರ್ಜಿದಾರರ ಪರ ವಕೀಲರು ಹಾಜರಾಗಿ ಎಫ್‌ಐಆರ್‌ ತಡೆ ನೀಡಲು ಕೋರಿದಾಗ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ನಾನು ಅರ್ಜಿದಾರರ ವಿರುದ್ಧದ ಎಫ್‌ಐಆರ್​ಗೆ ತಡೆ ನೀಡುವುದೇ ಇಲ್ಲ. ಪೋಸ್ಟ್‌ನಲ್ಲಿ ಭಯಾನಕ ಪದಗಳನ್ನು ಬಳಕೆ ಮಾಡಿದ್ದಾರೆ ಎಂದು ಪೀಠ ತಿಳಿಸಿತು.

ಅರ್ಜಿದಾರನ ಪರ ವಕೀಲರು, ಚಾನ್‌ ಪಾಷಾ ರಾಮನಗರದಲ್ಲಿ ಒಬ್ಬ ವಕೀಲರಾಗಿದ್ದಾರೆ. ಪ್ರಕರಣ ಕುರಿತಂತೆ ಅವರು ಸಹ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಫೇಸ್‌ಬುಕ್‌ ಖಾತೆ ಯಾರಿಂದಲೋ ಹ್ಯಾಕ್‌ ಆಗಿದೆ. ಹ್ಯಾಕ್‌ ಮಾಡಿದವರು ಖಾತೆಯನ್ನು ದುರ್ಬಳಕೆ ಮಾಡಿದ್ದಾರೆ ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ ಎಂದು ವಿವರಿಸಿದರು.

ವಾದವನ್ನು ತಿರಸ್ಕರಿಸಿದ ಪೀಠ, ಅರ್ಜಿದಾರರು ವಿಚಾರಣಾ ನ್ಯಾಯಾಲಯದ ಮುಂದೆಯೇ ಆರೋಪಗಳನ್ನು ಕೈ ಬಿಡಲು ಕೋರಿ ಅರ್ಜಿ ಸಲ್ಲಿಸಿಕೊಳ್ಳಿ ಎಂದು ಅರ್ಜಿದಾರ ಪರ ವಕೀಲರಿಗೆ ಸೂಚಿಸಿತು.

ಪ್ರಕರಣದ ಹಿನ್ನೆಲೆ :ಪಿ. ಶಿವಾನಂದ ಎಂಬುವವರು ರಾಮನಗರ ಟೌನ್‌ ಪೊಲೀಸ್‌ ಠಾಣೆಗೆ 2024ರ ಫೆ.3 ರಂದು ದೂರು ನೀಡಿದ್ದರು. ಫೆ. 2ರಂದು ನಾನು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ ವೀಕ್ಷಣೆ ಮಾಡುತ್ತಿದ್ದಾಗ ಚಾನ್‌ ಪಾಷಾ ಐಜೂರ್‌ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಹಾಕಿದ್ದಾರೆ.

ಅಲ್ಲದೇ, ಈ ರೀತಿ ನ್ಯಾಯಾಧೀಶರ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಮಾಡಿ ಸಮಾಜದಲ್ಲಿ ಆಕ್ಷೇಪಾರ್ಹ ಭಾವನೆ ವ್ಯಕ್ತಪಡಿಸಿರುವ ಚಾನ್‌ ಪಾಷಾ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರುದಾರರು ಕೋರಿದ್ದರು.

ಇದರಿಂದ ಚಾನ್‌ ಪಾಷಾ ವಿರುದ್ಧ ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ, ಶಾಂತಿಭಂಗ ಉಂಟು ಮಾಡಲು ಯಾವುದಾದರೂ ವ್ಯಕ್ತಿಗೆ ಪ್ರಚೋದನೆ ನೀಡಿದ, ದ್ವೇಷ ಭಾವನೆ ಮೂಡಿಸುವಂತ ಹೇಳಿಕೆ ನೀಡಿದ ಆರೋಪದ ಮೇಲೆ ಐಪಿಸಿ ಸೆಕ್ಷನ್‌ 504, 505(2) ಅಡಿ ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದರು. ಈ ಎಫ್‌ಐಆರ್ ರದ್ದು ಕೋರಿ ಚಾನ್‌ ಪಾಷಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ :ಕೋರ್ಟ್ ಕಲಾಪ ಬಹಿಷ್ಕರಿಸುವ ವಕೀಲರ ಅಮಾನತು: ಕಾನೂನು ತಿದ್ದುಪಡಿಗೆ ಹೈಕೋರ್ಟ್ ಪ್ರಸ್ತಾವ - High court

ABOUT THE AUTHOR

...view details