ಬೆಂಗಳೂರು: ಕೊಲೆ ಅಪರಾಧಿಯೊಬ್ಬನಿಗೆ ತನ್ನ ಮನೆಯಲ್ಲಿ ಆಶ್ರಯ ನೀಡಿದ ಆರೋಪ ಹೊತ್ತಿದ್ದ ವ್ಯಕ್ತಿಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ.
ತನ್ನ ವಿರುದ್ಧದ ಪ್ರಕರಣ ರದ್ದು ಕೋರಿ ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ ಗ್ರಾಮದ ಉದಯ್ಕುಮಾರ್ ಶೆಟ್ಟಿ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಆರ್. ಕೃಷ್ಣ ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಐಪಿಸಿಯ ಸೆಕ್ಷನ್ 216 (ಅಪರಾಧಿಗೆ ಉದ್ದೇಶಪೂರ್ವಕವಾಗಿ ಆಶ್ರಯ ನೀಡುವುದು)ರ ಅಡಿಯಲ್ಲಿ ಪ್ರಕರಣ ದಾಖಲಿಸಬೇಕಾದಲ್ಲಿ ಆರೋಪಿ (ಅರ್ಜಿದಾರರು)ಗೆ ಅಪರಾಧಿಯ ಶಿಕ್ಷೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಇರಬೇಕು. ಜೊತೆಗೆ, ಉದ್ದೇಶಪೂರ್ವಕವಾಗಿ ಅವರಿಗೆ ಆಶ್ರಯ ನೀಡಿದ್ದಾರೆ ಎಂದು ಸಾಬೀತುಪಡಿಸುವಂತಹ ಅಂಶಗಳು, ಅದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಹೊಂದಿರಬೇಕು ಎಂದು ಪೀಠ ತಿಳಿಸಿದೆ.
ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಮೊಬೈಲ್ ಫೋನ್ ದಾಖಲೆಗಳು ಲಭ್ಯವಾಗಿವೆ. ಅದರಂತೆ ಉದ್ದೇಶಪೂರ್ವಕವಾಗಿ ಅವರಿಗೆ ಆಶ್ರಯ ನೀಡಿದ್ದಾರೆ ಎಂದು ಸೂಚಿಸುವ ಯಾವುದೇ ಸಂದೇಶ ಹಾಗೂ ಸಂವಹನ ನಡೆದಿಲ್ಲ. ಆದರೆ, ಅಪರಾಧಿಯನ್ನು ಅರ್ಜಿದಾರರ ಮನೆಯಿಂದ ಬಂಧಿಸಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂಬ ಅಂಶವನ್ನು ಹೊರತುಪಡಿಸಿ, ಅರ್ಜಿದಾರರಿಗೆ ಅಪರಾಧಿಯ ಶಿಕ್ಷೆಯ ಬಗ್ಗೆ ತಿಳಿದಿತ್ತು ಮತ್ತು ಅವರು ಉದ್ದೇಶಪೂರ್ವಕವಾಗಿ ಅಪರಾಧಿಗೆ ಆಶ್ರಯ ನೀಡಿದ್ದಾರೆ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳ ಇಲ್ಲ ಎಂದು ತಿಳಿಸಿ ಪ್ರಕರಣವನ್ನು ರದ್ದುಗೊಳಿಸಿದೆ.
ಜೊತೆಗೆ, ಸಾಕ್ಷ್ಯಾಧಾರಗಳಿಲ್ಲದೆ ಅವರ ವಿರುದ್ಧ ಕಾನೂನು ಕ್ರಮಗಳನ್ನು ಮುಂದುವರಿಸುವುದು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ :ಕೊಲೆ ಆರೋಪದಲ್ಲಿ ಶರಣ್ ಅಲಿಯಾಸ್ ಶರಣ್ ಪೂಜಾರಿ ಎಂಬುವರಿಗೆ ಮಂಗಳೂರಿನ 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈ ಆದೇಶವನ್ನು ಹೈಕೋರ್ಟ್ ದೃಢಪಡಿಸಿತ್ತು. ಈ ಅಪರಾಧಿಯನ್ನು ಬಂಧಿಸಲು ಬಾರ್ಕೆ ಠಾಣಾ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆದರೆ, ಅಪರಾಧಿ ತಲೆಮರೆಸಿಕೊಂಡಿದ್ದರು. ಬಳಿಕ ಅರ್ಜಿದಾರ ಉದಯ್ಕುಮಾರ್ ಮನೆಯಲ್ಲಿ ಅಪರಾಧಿಯನ್ನು ಬಂಧಿಸಿದ್ದರು. ಇದರಿಂದಾಗಿ ಅಪರಾಧಿಗೆ ಆಶ್ರಯ ನೀಡಿದ ಆರೋಪದಲ್ಲಿ ಉದಯ್ಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಉದ್ದೇಶಪೂರ್ವಕವಾಗಿ ಅಪರಾಧಿಗೆ ಸಹಾಯ ಮಾಡಿದ್ದಾರೆ ಎಂದು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರಗಳನ್ನು ತನಿಖಾಧಿಕಾರಿಗಳು ಹಾಜರುಪಡಿಸಿಲ್ಲ. ಅರ್ಜಿದಾರರು ತಮ್ಮ ಮನೆಗೆ ಬಂದಾಗ, ಅಪರಾಧಿಯ ಕುರಿತಂತೆ ಯಾವುದೇ ಮಾಹಿತಿ ಇರಲಿಲ್ಲ. ಅವರಿಗೆ ಕಾನೂನಿನಲ್ಲಿ ಆಗಬಹುದಾದ ತೊಂದರೆಗಳ ಕುರಿತು ಅರಿವಿರಲಿಲ್ಲ. ಹೀಗಾಗಿ ಅವರಿಗೆ ಆಶ್ರಯ ನೀಡಲಾಗಿತ್ತು ಎಂದು ಪೀಠಕ್ಕೆ ವಿವರಿಸಿದ್ದರು.
ಇದನ್ನೂ ಓದಿ: ಕೊಲೆ ಯತ್ನ ಪ್ರಕರಣಕ್ಕೆ ಪ್ರತಿಯಾಗಿ ಎಸ್ಸಿ - ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು: ಎಫ್ಐಆರ್ ರದ್ದು
ಇದನ್ನೂ ಓದಿ:4 ವರ್ಷ ಪ್ರೀತಿಸಿ ಮದುವೆ; ಎರಡೇ ತಿಂಗಳಲ್ಲಿ ಬೇರ್ಪಟ್ಟ ದಂಪತಿಗೆ ವಿಚ್ಛೇದನ, ಪತ್ನಿಗೆ 10 ಲಕ್ಷ ರೂ. ಜೀವನಾಂಶ