ಕರ್ನಾಟಕ

karnataka

ETV Bharat / state

ರೇವ್ ಪಾರ್ಟಿ: ಫಾರ್ಮ್ ಹೌಸ್ ಮಾಲೀಕನ ವಿರುದ್ಧದ ಪ್ರಕರಣ ರದ್ದು - Rave Party Case - RAVE PARTY CASE

ರೇವ್‌ ಪಾರ್ಟಿ ಪ್ರಕರಣದಲ್ಲಿ ಫಾರ್ಮ್‌ ಹೌಸ್‌ ಬಾಡಿಗೆ ನೀಡಿದ್ದ ವ್ಯಕ್ತಿಯ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ ಗುರುವಾರ ರದ್ದುಪಡಿಸಿತು.

ಫಾರ್ಮ್ ಹೌಸ್ ಮಾಲೀಕನ ವಿರುದ್ಧದ ಪ್ರಕರಣ ರದ್ದು
ಫಾರ್ಮ್ ಹೌಸ್ ಮಾಲೀಕನ ವಿರುದ್ಧದ ಪ್ರಕರಣ ರದ್ದು (ETV Bharat)

By ETV Bharat Karnataka Team

Published : Sep 6, 2024, 7:28 AM IST

Updated : Sep 6, 2024, 8:24 AM IST

ಬೆಂಗಳೂರು:ಬೆಂಗಳೂರು ನಗರ ಹೊರವಲಯದ ಹೆಬ್ಬಗೋಡಿ ಸಮೀಪದ ಸಿಂಗೇನ ಅಗ್ರಹಾರದ ಜಿ.ಆರ್‌.ಫಾರ್ಮ್‌ ಹೌಸ್‌ನಲ್ಲಿ ಮೇ ತಿಂಗಳಲ್ಲಿ ನಡೆದ ರೇವ್‌ ಪಾರ್ಟಿ ಪ್ರಕರಣದ ಸಂಬಂಧ ಫಾರ್ಮ್‌ ಹೌಸ್‌ ಬಾಡಿಗೆ ನೀಡಿದ್ದ ವ್ಯಕ್ತಿಯ ವಿರುದ್ಧದ ಕ್ರಿಮಿನಲ್‌ ಪ್ರಕರಣವನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ಪ್ರಕರಣ ರದ್ದು ಕೋರಿ ಸಿಂಗೇನ ಅಗ್ರಹಾರದ 68 ವರ್ಷದ ಆರ್‌.ಗೋಪಾಲ್‌ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿತು.

"ಅರ್ಜಿದಾರರು ಜಾಗವನ್ನು ಬಾಡಿಗೆಗೆ ನೀಡಿದ್ದಾರೆಂದ ಮಾತ್ರಕ್ಕೆ ಅವರಿಗೆ ಬಾಡಿಗೆ ಜಾಗದಲ್ಲಿ ನಡೆಯುತ್ತಿದ್ದ ಮಾದಕ ದ್ರವ್ಯ ಸೇವನೆ ಚಟುವಟಿಕೆಗಳ ಬಗ್ಗೆ ಸಂಪೂರ್ಣ ಅರಿವಿದೆ ಎಂದರ್ಥವಲ್ಲ. ಅದಕ್ಕಾಗಿ ಅವರನ್ನು ಮಾದಕ ದ್ರವ್ಯ ನಿಗ್ರಹ ಕಾಯಿದೆ (ಎನ್‌ಡಿಪಿಎಸ್‌) ಅಡಿ ಹೊಣೆಗಾರರನ್ನಾಗಿ ಮಾಡಲಾಗದು. ಫಾರ್ಮ್‌ ಹೌಸ್​ನಲ್ಲಿ ನಡೆಯುತ್ತಿದ್ದ ಹುಟ್ಟುಹಬ್ಬದ ಪಾರ್ಟಿಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ಅರ್ಜಿದಾರರಿಗೆ ತಿಳಿದಿದೆ ಎಂಬುದನ್ನು ಸಾಬೀತುಪಡಿಸಲು ಮೇಲ್ನೋಟಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಹಾಗಾಗಿ ಕೃತ್ಯಕ್ಕೆ ಅವರ ಪಾತ್ರವಿದೆ ಎಂದು ಹೇಳಲಾಗದು" ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

"ಎನ್‌ಡಿಎಸ್‌ಸಿ ಕಾಯಿದೆ ಸೆಕ್ಷನ್​ 25ರ ಪ್ರಕಾರ ಯಾರು ಜಾಗದ ಮಾಲೀಕರಾಗಿರುತ್ತಾರೋ ಅಂತಹವರಿಗೆ ಆ ಜಾಗದಲ್ಲಿ ಏನಾನಾಗುತ್ತಿದೆ ಎಂಬುದರ ಅರಿವಿದ್ದರೆ ಮತ್ತು ಎಲ್ಲಾ ತಿಳಿದಿದ್ದು ಅಂತಹ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟರೆ ಅಂತಹ ಸಂದರ್ಭದಲ್ಲಿ ಮಾತ್ರ ಅವರನ್ನು ಕೃತ್ಯಕ್ಕೆ ಹೊಣೆಗಾರರನ್ನಾಗಿ ಮಾಡಬಹುದಾಗಿದೆ. ಆದರೆ, ಈ ಪ್ರಕರಣದಲ್ಲಿ ಮಾಲೀಕರಿಗೆ ಆ ಜಾಗದಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯುವುದಿಲ್ಲ" ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ:2024ರ ಮೇ 19ರಂದು ಖಚಿತ ಮಾಹಿತಿ ಆಧರಿಸಿ ಪೊಲೀಸರು ಹೆಬ್ಬಗೋಡಿ ಸಮೀಪದ ಸಿಂಗೇನ ಅಗ್ರಹಾರದಲ್ಲಿನ ಜಿ.ಆರ್‌.ಫಾರ್ಮ್‌ ಮೇಲೆ ದಾಳಿ ಮಾಡಿದ್ದಾಗ ಬರ್ತ್‌ಡೇ ಪಾರ್ಟಿಗಳ ಹೆಸರಿನಲ್ಲಿ ಮದ್ಯ ಹಾಗೂ ಮಾದಕ ದ್ರವ್ಯ ಸೇವಿಸುವ ರೇವ್‌ ಪಾರ್ಟಿಗಳು ನಡೆಯುತ್ತಿರುವುದು ಕಂಡು ಬಂದಿತ್ತು. ಪೊಲೀಸರು ಫಾರ್ಮ್‌ ಹೌಸ್​ಗೆ ಬೀಗ ಹಾಕಿ, ಅಲ್ಲಿ ಗಾಂಜಾ, ಎಂಡಿಎಂಎ ಪಿಲ್ಸ್‌, ಕೊಕೇನ್‌ ಸೇರಿದಂತೆ ಹಲವು ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದರು.

ಪಾರ್ಟಿಯಲ್ಲಿದ್ದವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾಗ ಅವರು ಮಾದಕ ದ್ರವ್ಯ ಸೇವನೆ ಮಾಡಿರುವುದು ದೃಢಪಟ್ಟಿತ್ತು. ಪೊಲೀಸರು ಎನ್‌ಡಿಪಿಎಸ್‌ ಕಾಯಿದೆಯಡಿ ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅದರಲ್ಲಿ ಫಾರ್ಮ್‌ಹೌಸ್‌ ಬಾಡಿಗೆ ನೀಡಿದ್ದ ಆರ್‌.ಗೋಪಾಲ ರೆಡ್ಡಿಯನ್ನು ಆರನೇ ಆರೋಪಿಯನ್ನಾಗಿ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಇದನ್ನೂ ಓದಿ:ಉದ್ಯಮಿ ಸುಶೀಲ್​ ಮಂತ್ರಿ ಕುಟುಂಬ ವಿರುದ್ಧದ ಲುಕ್​ಔಟ್​ ಸುತ್ತೋಲೆ ಅಮಾನತ್ತಿನಲ್ಲಿಟ್ಟ ಹೈಕೋರ್ಟ್ - High Court Orders

Last Updated : Sep 6, 2024, 8:24 AM IST

For All Latest Updates

ABOUT THE AUTHOR

...view details