ಬೆಂಗಳೂರು:ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ನಾಮಪತ್ರದೊಂದಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಮ್ಮ ಮೇಲಿನ ಕ್ರಿಮಿನಲ್ ಪ್ರಕರಣದ ಮಾಹಿತಿ ನೀಡದ ಆರೋಪದ ಮೇಲೆ ವಿಚಾರಣಾ ನ್ಯಾಯಾಲಯವು ಚಿಕ್ಕಪೇಟೆ ಶಾಸಕ ಬಿ.ಜಿ.ಉದಯ್ ಗರುಡಾಚಾರ್ ಅವರಿಗೆ ಎರಡು ತಿಂಗಳು ಸಾಧಾರಣ ಶಿಕ್ಷೆ ಹಾಗೂ ಹತ್ತು ಸಾವಿರ ರೂ. ದಂಡ ವಿಧಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಉದಯ್ ಗರುಡಾಚಾರ್ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠವು ಈ ಆದೇಶ ಮಾಡಿದೆ. ಅಪರಾಧ ಪ್ರಕರಣ ಸಂಬಂಧ ದೋಷಾರೋಪಗಳನ್ನು ಹೊರಿಸಿದ ಮತ್ತು ಆ ಸಂಬಂಧ ನ್ಯಾಯಾಲಯವು ಕಾಗ್ನಿಜೆನ್ಸ್ ತೆಗೆದುಕೊಂಡ ಸಂದರ್ಭದಲ್ಲಿ ತಮ್ಮ ಮೇಲಿನ ಆರೋಪಗಳ ಕುರಿತು ಮಾಹಿತಿಯನ್ನು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಯು ತಿಳಿಸಬೇಕಾಗುತ್ತದೆ. ಆ ಆರೋಪಗಳನ್ನು ಪರಿಗಣಿಸಬೇಕಾಗುತ್ತದೆ. ಅವರನ್ನು ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯ ಎಂಬುದಾಗಿ ವ್ಯಾಖ್ಯಾನಿಸಬಹುದಾಗಿದೆ. ಎಫ್‌ಐಆರ್ ಅಥವಾ ಖಾಸಗಿ ದೂರು ದಾಖಲಾದ ಮಾತ್ರಕ್ಕೆ ಆರೋಪಿಯಾಗಿ ದೃಢಪಟ್ಟು, ಚುನಾವಣಾ ಪ್ರಮಾಣಪತ್ರದಲ್ಲಿ ಪ್ರಕರಣದ ಮಾಹಿತಿ ನೀಡಬೇಕು ಎಂದರ್ಥವಲ್ಲ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಪ್ರಕರಣವೊಂದರ ಸಂಬಂಧ ದೂರು ದಾಖಲಾಗಿತ್ತು. ಆದರೆ, ನಾಮಪತ್ರ ಸಲ್ಲಿಕೆಯ ಸಂದರ್ಭದ ವೇಳೆಗೆ ಆ ದೂರಿನ ಸಂಬಂಧ ಅರ್ಜಿದಾರರ ವಿರುದ್ಧ ದೋಷಾರೋಪಣೆ ಹೊರಿಸಲಾಗಿರಲಿಲ್ಲ. ವಿಚಾರಣಾ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡಿರಲಿಲ್ಲ. ಹೀಗಿದ್ದರೂ ಚುನಾವಣೆಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಅರ್ಜಿದಾರರು ತಮ್ಮ ಮೇಲಿನ ಕ್ರಿಮಿನಲ್ ಪ್ರಕರಣದ ಮಾಹಿತಿ ಮರೆಮಾಚಿದ್ದಾರೆ ಎಂದೇಳಿ ಅವರನ್ನು ದೋಷಿಯಾಗಿ ಪರಿಗಣಿಸಿದ ಹಾಗೂ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ಕ್ರಮ ಸರಿಯಲ್ಲ ಎಂದು ಪೀಠ ಹೇಳಿದೆ.