ಬೆಂಗಳೂರು: ಹಾಸನ ಜಿಲ್ಲಾಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಉಂಟುಮಾಡಿದ ಆರೋಪದಡಿ ವಕೀಲ ಜಿ. ದೇವರಾಜೇಗೌಡ ವಿರುದ್ಧ ದಾಖಲಾಗಿರುವ ಎಫ್ಐಆರ್ ಹಾಗೂ ಅದರ ಕುರಿತ ವಿಚಾರಣೆಯನ್ನು ಹೈಕೋರ್ಟ್ ಬುಧವಾರ ರದ್ದುಗೊಳಿಸಿತು.
ಪ್ರಕರಣ ಸಂಬಂಧ ತಮ್ಮ ವಿರುದ್ಧ ಹಾಸನದ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ವಕೀಲ ಜಿ.ದೇವರಾಜೇಗೌಡ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಕೈಗತ್ತಿಕೊಂಡರು.
ಪ್ರಕರಣವೇನು?:ಜಿ.ದೇವರಾಜೇಗೌಡ ಅವರು ನನ್ನ ಅನುಮತಿ ಇಲ್ಲದೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ನನ್ನನ್ನು ನಿಂದಿಸಿದ್ದಾರೆ. ಈ ಮೂಲಕ ಸಾರ್ವಜನಿಕರ ಕರ್ತವ್ಯಕ್ಕೆ ಅಡ್ಡಿ ಉಂಟುಮಾಡಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಸತ್ಯಭಾಮ ಹಾಸನ ನಗರ ಪೊಲೀಸ್ ಠಾಣೆಯಲ್ಲಿ 2024ರ ಮಾರ್ಚ್ 19ರಂದು ದೂರು ದಾಖಲಿಸಿದ್ದರು.
ಚನ್ನರಾಯಪಟ್ಟಣ ಆದ್ಯಾಸ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಕಳೆದ ಆರು ತಿಂಗಳಿನಿಂದ ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಬಕಾರಿ ಇಲಾಖೆ ಆಯುಕ್ತರು ತನಿಖೆ ನಡೆಸಿ ನಿಯಮ ಉಲ್ಲಂಘಿಸಿರುವುದು ದೃಢಪಟ್ಟಿದ್ದು, ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ವರದಿ ಮಾಡಲಾಗಿದೆ. ಆದರೆ, ಜಿಲ್ಲಾಧಿಕಾರಿಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್ ವಿರುದ್ಧ ಕ್ರಮ ಕೈಗೊಳ್ಳುವ ಬದಲಿಗೆ, ಕಡತಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ ಎಂದು ದೇವರಾಜೇಗೌಡ ಅವರು 15ರ ಮಾರ್ಚ್ 2024ರಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ ಎಂದು ಸತ್ಯಭಾಮ ದೂರಿನಲ್ಲಿ ತಿಳಿಸಿದ್ದರು. ಇದನ್ನು ರದ್ದುಪಡಿಸವಂತೆ ಕೋರಿ ದೇವರಾಜೇಗೌಡ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ವಿರುದ್ಧದ ಪ್ರಕರಣ ರದ್ದು - Siddhasiri Sugar Factory