ಕರ್ನಾಟಕ

karnataka

ETV Bharat / state

ಕೋಮು ಭಾಷಣ ಕೇಸ್​: ರಾಷ್ಟ್ರೀಯವಾದಿ ಕಾಜಲ್ ಹಿಂದುಸ್ತಾನಿ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ - Kajal Hindustani - KAJAL HINDUSTANI

ಕೋಮು ಭಾಷಣ ಆರೋಪ ಪ್ರಕರಣದಲ್ಲಿ ಬಲಪಂಥೀಯ ನಾಯಕಿ ಕಾಜಲ್ ಹಿಂದುಸ್ತಾನಿ ಅವರಿಗೆ ಕರ್ನಾಟಕ ಹೈಕೋರ್ಟ್ ರಿಲೀಫ್​ ನೀಡಿದೆ.

ರಾಷ್ಟ್ರೀಯವಾದಿ ಕಾಜಲ್ ಹಿಂದುಸ್ತಾನಿ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯವಾದಿ ಕಾಜಲ್ ಹಿಂದುಸ್ತಾನಿ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

By ETV Bharat Karnataka Team

Published : Apr 25, 2024, 10:45 PM IST

ಬೆಂಗಳೂರು: ಕೋಮು, ದ್ವೇಷ ಭಾಷಣ ಮಾಡಿದ ಆರೋಪ ಸಂಬಂಧ ರಾಷ್ಟ್ರೀಯವಾದಿ ಕಾಜಲ್ ಹಿಂದುಸ್ತಾನಿ ಅವರ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಕ್ರಿಯೆಗಳಿಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ತಮ್ಮ ವಿರುದ್ಧದ ತನಿಖೆ ನಡೆಸಲು ಉಡುಪಿ ಜಿಲ್ಲಾಧಿಕಾರಿ ನೀಡಿರುವ ಪೂರ್ವಾನುಮತಿಯನ್ನು ರದ್ದು ಮಾಡಬೇಕು ಎಂದು ಕೋರಿ ಕಾಜಲ್ ಹಿಂದುಸ್ತಾನಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪಸನ್ನ ಅವರಿದ್ದ ಪೀಠವು ಪ್ರಕರಣದಲ್ಲಿ ದಾಖಲಿಸಲಾದ ಎಫ್‌ಐಆರ್‌ಗೆ ತಡೆ ನೀಡಿ ಆದೇಶಿಸಿತು.

ವಿಚಾರಣೆಯ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಅರುಣ್‌ಶ್ಯಾಮ್ ವಾದ ಮಂಡಿಸಿ, ಅರ್ಜಿದಾರರ ಭಾಷಣವು ಯಾವುದೇ ರೀತಿಯ ಕೋಮು ದ್ವೇಷಕ್ಕೆ ಎಡೆ ಮಾಡಿಕೊಟ್ಟಿಲ್ಲ. ಎಫ್‌ಐಆರ್‌ನಲ್ಲಿ ಮಾಡಲಾಗಿರುವ ಆರೋಪಗಳನ್ನು ಸಾಬೀತುಪಡಿಸುವ ಯಾವುದೇ ದಾಖಲೆಗಳಿಲ್ಲ. ಸಮಾಜದಲ್ಲಿ ಅರ್ಜಿದಾರರ ಘನತೆ ಹಾಗೂ ಖ್ಯಾತಿಗೆ ಧಕ್ಕೆ ತರುವ ಉದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖಾಧಿಕಾರಿಗಳಾದ ಉಡುಪಿ ನಗರ ಠಾಣಾ ಪೊಲೀಸರು ಪೂರಕ ಸಾಕ್ಷ್ಯಾಧಾರಗಳ ಕೊರತೆಯಿದ್ದರೂ ಅರ್ಜಿದಾರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳು ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ನೀಡಿದ್ದಾರೆ. ಆದ್ದರಿಂದ ಈ ಪೂರ್ವಾನುಮತಿಯನ್ನು ರದ್ದುಪಡಿಸಬೇಕು ಎಂದು ಕೋರಿದರು.

ಈ ಅಂಶವನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ಹಿನ್ನೆಲೆ:ಉಡುಪಿಯಲ್ಲಿ ಕೃಷ್ಣ ಮಠದ ಸಮೀಪದ ಸ್ಥಳದಲ್ಲಿ 2022 ರ ಅ.2 ರಂದು ಹಿಂದು ಜಾಗರಣಾ ವೇದಿಕೆ ಆಯೋಜಿಸಿದ್ದ ‘ದುರ್ಗಾ ದೌಡ್’ ಕಾರ್ಯಕ್ರಮಕ್ಕೆ ಕಾಜಲ್ ಹಿಂದುಸ್ತಾನಿ ಅವರು ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು, ಲವ್ ಜಿಹಾದ್ ನಡೆಸಿ ಹಿಂದು ಹೆಣ್ಣು ಮಕ್ಕಳನ್ನು ಮುಸ್ಲಿಂ ಸಮುದಾಯದವರು ವಂಚಿಸುತ್ತಿದ್ದಾರೆ. ಲವ್ ಜಿಹಾದ್‌ಗೆ ಬಾಲಿವುಡ್ ಸಹ ನೆರವು ಹಾಗೂ ಬೆಂಬಲ ಕೊಡುತ್ತಿದೆ ಎಂದು ಆರೋಪಿಸಿದ್ದರು.

ಇದರ ವಿರುದ್ಧ ಉಡುಪಿ ನಗರ ಪೊಲೀಸರು ಕಾಜಲ್ ಅವರ ಮೇಲೆ ಎಫ್‌ಐಆರ್ ದಾಖಲಿಸಿದ್ದರು. ವಿವಿಧ ವರ್ಗಗಳ ಮಧ್ಯೆ ವೈರ, ದ್ವೇಷ ಮತ್ತು ವೈಮನಸ್ಸು ಹುಟ್ಟಿಸುವ ಉದ್ದೇಶದಿಂದ ಕಾಜಲ್ ಅವರು ದ್ವೇಷಪೂರಿತ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಅದರಲ್ಲಿ ಆರೋಪಿಸಲಾಗಿತ್ತು. ಈ ಆರೋಪ ಸಂಬಂಧ ತನಿಖೆ ಪೂರ್ಣಗೊಳಿಸಿದ್ದ ಪೊಲೀಸರು ದೋಷಾರೋಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್‌ ತನಿಖಾಧಿಕಾರಿಗಳಿಗೆ 2023ರ ಡಿ.18ರಂದು ಉಡುಪಿ ಜಿಲ್ಲಾಧಿಕಾರಿ ಪೂರ್ವಾನುಮತಿ ನೀಡಿದ್ದರು. ಅದನ್ನು ರದ್ದುಪಡಿಸುವಂತೆ ಕೋರಿ ಕಾಜಲ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ:2023ರ ಐಪಿಎಲ್​ ಪಂದ್ಯಗಳ ಅನಧಿಕೃತ ಸ್ಟ್ರೀಮಿಂಗ್: ನಟಿ ತಮನ್ನಾ ಭಾಟಿಯಾಗೆ ಸಮನ್ಸ್​ - Tamannaah Bhatia

ABOUT THE AUTHOR

...view details