ಬೆಂಗಳೂರು :ಬೆಂಗಳೂರು ವಕೀಲರ ಸಂಘದ ಚುನಾವಣೆಯನ್ನು 2025ರ ಫೆಬ್ರವರಿ 2ರಂದು ನಡೆಸಲು ಉನ್ನತಾಧಿಕಾರ ಸಮಿತಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಜನವರಿ 19 ಅಥವಾ ಫೆಬ್ರವರಿ 2ರಂದು ಬೆಂಗಳೂರು ವಕೀಲರ ಸಂಘಕ್ಕೆ ಚುನಾವಣೆ ನಡೆಸಲು ಉನ್ನತಾಧಿಕಾರ ಸಮಿತಿಗೆ ನಿರ್ದೇಶಿಸಬೇಕು ಎಂದು ಕೋರಿ ಬೆಂಗಳೂರಿನ ಮಂಜುನಾಥ್ ನಾಯ್ಕ್ ಮತ್ತು ಇವಿಎಂ ಬಳಕೆ ಹಾಗೂ ಪೊಲೀಸ್ ಭದ್ರತೆ ಕೋರಿ ಪ್ರಸ್ತುತ ಅಧ್ಯಕ್ಷರಾಗಿರುವ ವಿವೇಕ್ ಸುಬ್ಬಾರೆಡ್ಡಿ ಅರ್ಜಿ ಸಲ್ಲಿಸಿದ್ದರು. ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಏಕಸದಸ್ಯ ಪೀಠ ಈ ಸೂಚನೆ ನೀಡಿದೆ.
ಉನ್ನತಾಧಿಕಾರ ಸಮಿತಿಯು ಬೆಂಗಳೂರು ವಕೀಲರ ಸಂಘದ ಚುನಾವಣೆಯನ್ನು ಫೆಬ್ರವರಿ 2ರಂದು ನಡೆಸಬೇಕು. ಡಿಸೆಂಬರ್ 30ರ ಒಳಗೆ ಅಂತಿಮ ಮತದಾರರ ಪಟ್ಟಿಯನ್ನು ಸಮಿತಿ ಬಿಡುಗಡೆ ಮಾಡಬೇಕು. ದ್ವಿಸದಸ್ಯತ್ವ ಮತ್ತು ಎಐಬಿಇ ಪರೀಕ್ಷೆ ಪಾಸಾಗದವರಿಗೆ ಮತದಾನದ ಅವಕಾಶ ಕಲ್ಪಿಸದಂತೆ ಉನ್ನತಾಧಿಕಾರ ಸಮಿತಿ ಕ್ರಮ ಕೈಗೊಳ್ಳಬೇಕು. ಚುನಾವಣೆಗೆ ಅಗತ್ಯವಾದ ವಿದ್ಯುನ್ಮಾನ ಮತಯಂತ್ರಗಳನ್ನು ಚುನಾವಣಾ ಆಯೋಗ ಒದಗಿಸಬೇಕು. ಪೊಲೀಸರು ಭದ್ರತೆ ಒದಗಿಸಬೇಕು ಎಂದು ಸೂಚನೆ ನೀಡಿತು.
ಮಹಿಳಾ ವಕೀಲರ ಮೀಸಲಾತಿಗೆ ಆಗ್ರಹ:ಮಹಿಳಾ ವಕೀಲರೊಬ್ಬರು ಸುಪ್ರೀಂಕೋರ್ಟ್ ಗುರುವಾರ ನೀಡಿರುವ ತೀರ್ಪಿಗೆ ಅನುಗುಣವಾಗಿ ಮುಂದಿನ ಎಎಬಿ ಚುನಾವಣೆಯಲ್ಲಿ ಶೇ.33ರಷ್ಟು ಮೀಸಲಾತಿಯನ್ನು ಮಹಿಳಾ ವಕೀಲರಿಗೆ ಕಲ್ಪಿಸಬೇಕು ಎಂದು ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ಅದನ್ನು ಪರಿಗಣಿಸಬೇಕು ಎಂದು ಪೀಠಕ್ಕೆ ಕೋರಿದರು.