ಕರ್ನಾಟಕ

karnataka

ETV Bharat / state

ಚೆನ್ನೈ-ಬೆಂಗಳೂರು ಕಾರಿಡಾರ್​​​​ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಅರ್ಜಿ: ಕೇಂದ್ರ, ರಾಜ್ಯ ಸರ್ಕಾರಕ್ಕೆ ನೋಟಿಸ್ - Chennai Bengaluru Corridor

ಚೆನ್ನೈ-ಬೆಂಗಳೂರು ಕಾರಿಡಾರ್‌ ಮಾರ್ಗದಲ್ಲಿ ಮೇಲ್ಸೇತುವೆ ನಿರ್ಮಾಣ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌ ಜಾರಿಗೊಳಿಸಿದೆ.

high-court-notice-to-central-and-state-government-on-chennai-bengaluru-corridor
ಚೆನ್ನೈ-ಬೆಂಗಳೂರು ಕಾರಿಡಾರ್​​​​ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಅರ್ಜಿ: ಕೇಂದ್ರ, ರಾಜ್ಯ ಸರ್ಕಾರಕ್ಕೆ ನೋಟಿಸ್

By ETV Bharat Karnataka Team

Published : Feb 9, 2024, 7:55 PM IST

ಬೆಂಗಳೂರು:ಚೆನ್ನೈ-ಬೆಂಗಳೂರು ಕಾರಿಡಾರ್‌ ಮಾರ್ಗದಲ್ಲಿನ ಹೊಸಕೋಟೆ ತಾಲೂಕಿನ ಕೊಳತೂರು ಜಂಕ್ಷನ್‌ ಬಳಿ ಮೇಲ್ಸೇತುವೆ ನಿರ್ಮಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಂಬಂಧ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್‌ ನೀಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕೃಷಿಕರಾದ ಕೆ.ವಿ.ರವಿಕುಮಾರ್ ಸೇರಿದಂತೆ ಕೊಳತೂರು, ಅಪ್ಪಸಂದ್ರ, ಸೋಲೂರು ಹಾಗೂ ಊರಹಳ್ಳಿ ಗ್ರಾಮಗಳ ಒಟ್ಟು 13 ನಿವಾಸಿಗಳು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್ ಹಾಗೂ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷ, ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್‌ ಯೋಜನಾ ನಿರ್ದೇಶಕ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಮುಂದಿನ ವಿಚಾರಣೆಯನ್ನು ಕೋರ್ಟ್ ಮಾರ್ಚ್‌ 1ಕ್ಕೆ ಮುಂದೂಡಿದೆ.

ಕೊಳತೂರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖ ಗ್ರಾಮ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಇದರ ಮುಖ್ಯ ರಸ್ತೆಯು ಕನಿಷ್ಠ 20 ಗ್ರಾಮಗಳನ್ನು ಸಂಪರ್ಕಿಸುತ್ತದೆ. ಈ ಗ್ರಾಮವು ಹಾಲು ಉತ್ಪಾದನೆಯಲ್ಲಿ ಜಿಲ್ಲೆಯಲ್ಲೇ 2ನೇ ಸ್ಥಾನದಲ್ಲಿದೆ. ಸಮೀಪದಲ್ಲೇ ಜಿಲ್ಲಾ ತಾಯಿ ಮಕ್ಕಳ ಆಸ್ಪತ್ರೆಯನ್ನು ಸುಮಾರು 40 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಭಾಗದಲ್ಲಿ ಪ್ರತಿದಿನ ಸರಾಸರಿ ಒಂದು ಸಾವಿರ ವಾಹನಗಳ ಸಂಚಾರವಿದೆ. ಮುಖ್ಯವಾಗಿ ಶಾಲಾ ಮಕ್ಕಳು ಮತ್ತು ಹಾಲು ಸಾಗಣೆ ವಾಹನಗಳು, ಉಗ್ರಾಣಗಳಿಂದ ತರಕಾರಿ, ಹಣ್ಣು, ಇತ್ಯಾದಿ ದಿನಬಳಕೆ ಸಾಮಗ್ರಿಗಳ ಸರಬರಾಜು ನೇರವಾಗಿ ಬೆಂಗಳೂರು–ಕೋಲಾರ ರಸ್ತೆಯ ಎನ್​ಹೆಚ್‌–75ಕ್ಕೆ ತಲುಪುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಬೆಂಗಳೂರು–ಚೆನ್ನೈ ಕಾರಿಡಾರ್‌ ರಸ್ತೆಯಿಂದ ಕೊಳತೂರು ಗ್ರಾಮದ ಮುಖ್ಯ ದ್ವಾರಕ್ಕೆ ಲಿಂಕ್‌ ರಸ್ತೆ ಕೊಟ್ಟು ಅಡ್ಡಿಪಡಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು, ಮುಖ್ಯವಾಗಿ ತಾಯಿ ಮಕ್ಕಳ ಆಸ್ಪತ್ರೆಗೆ ಬರುವವರು ಸುತ್ತಿಕೊಂಡು ಬರಬೇಕಾಗಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ಸಾಕಷ್ಟು ಮನವಿ ಸಲ್ಲಿಸಿದ್ದರೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್​ಹೆಚ್‌ಎಐ) ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಬೇರಾವುದೇ ರೀತಿಯ ಪರಿಹಾರ ಮಾರ್ಗವನ್ನೂ ತೋರಿಸಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ:ಮುಂದಿನ ವಿಚಾರಣೆವರೆಗೂ ರಮೇಶ್‌ ಜಾರಕಿಹೊಳಿ ವಿರುದ್ಧ ಯಾವುದೇ ಕ್ರಮ ಬೇಡ: ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ABOUT THE AUTHOR

...view details