ಕರ್ನಾಟಕ

karnataka

ETV Bharat / state

ಕೆಎಂಸಿಯಲ್ಲಿ ಅನಧಿಕೃತ ಪದಾಧಿಕಾರಿಗಳಿಂದ ಕಾರ್ಯನಿರ್ವಹಣೆ ಆರೋಪ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ - High Court - HIGH COURT

ಕೆಎಂಸಿಯಲ್ಲಿ ಅನಧಿಕೃತ ಪದಾಧಿಕಾರಿಗಳಿಂದ ಕಾರ್ಯನಿರ್ವಹಣೆ ಆರೋಪ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್​ ಜಾರಿ ಮಾಡಿದೆ.

high-court
ಕೆಎಂಸಿಯಲ್ಲಿ ಅನಧಿಕೃತ ಪದಾಧಿಕಾರಿಗಳಿಂದ ಕಾರ್ಯನಿರ್ವಹಣೆ ಆರೋಪ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

By ETV Bharat Karnataka Team

Published : Apr 24, 2024, 9:22 PM IST

ಬೆಂಗಳೂರು:ಕರ್ನಾಟಕ ವೈದ್ಯಕೀಯ ಮಂಡಳಿ (ಕೆಎಂಸಿ) ಪದಾಧಿಕಾರಿಗಳ ಹುದ್ದೆಗೆ ಹೊಸದಾಗಿ ಚುನಾವಣೆ ನಡೆದು 12 ಸದಸ್ಯರು ಆಯ್ಕೆಯಾಗಿದ್ದರೂ ಸಹ ಹಿಂದಿನ ಪದಾಧಿಕಾರಿಗಳು ಇಬ್ಬರು ಅನಧಿಕೃತವಾಗಿ ಅಧ್ಯಕ್ಷರು, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್​ ಜಾರಿ ಮಾಡಿದೆ.

ಸರ್ಕಾರ ಕೆಎಂಸಿಗೆ ಐವರು ಸದಸ್ಯರನ್ನು ನಾಮನಿರ್ದೇಶನ ಮಾಡುವಲ್ಲಿ ವಿಫಲವಾಗಿದೆ ಎಂದು ಮಂಗಳೂರಿನ ವೈದ್ಯ ಡಾ.ಶ್ರೀನಿವಾಸ ಕಕ್ಕಿಲಾಯ ಎಂಬುವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆಗಳನ್ನು ಸಲ್ಲಿಸಲು ಸೂಚಿಸಿ ವಿಚಾರಣೆ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಕೆಎಂಸಿ ಪದಾಧಿಕಾರಿಗಳ ಹುದ್ದೆಗೆ 2020 ರ ಜನವರಿ 23 ರಂದು ಚುನಾವಣೆ ನಡೆದಿತ್ತು. ನಂತರ ಚುನಾವಣೆಯ ಸಿಂಧುತ್ವ ಸಂಬಂಧ ನ್ಯಾಯಾಲಯದಲ್ಲಿ ಸುದೀರ್ಘ ಕಾನೂನು ಸಮರದ ನಂತರ 12 ಹೊಸ ಪದಾಧಿಕಾರಿಗಳು 2023ರ ನವೆಂಬರ್​​ 27ರಂದು ಅಧಿಕಾರ ಸ್ವೀಕರಿಸಿದರು. ಆದರೆ, ಸರ್ಕಾರ ಕೆಎಂಸಿ ಕಾಯಿದೆ ಸೆಕ್ಷನ್ 3(2) (ಸಿ) ಅನ್ವಯ ಐವರು ಸದಸ್ಯರನ್ನು ನಾಮನಿರ್ದೇಶನ ಮಾಡದ ಹಿನ್ನೆಲೆಯಲ್ಲಿ ಹೊಸ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ನಡೆದಿಲ್ಲ'' ಎಂದು ನ್ಯಾಯಪೀಠಕ್ಕೆ ವಿವರಿಸಿದರು.

''ಹೊಸದಾಗಿ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಹಿಂದೆ 2011ರಲ್ಲಿ ಆಯ್ಕೆಯಾಗಿದ್ದ ಸದಸ್ಯರಾದ ವಿ.ಕಾಂಚಿಪ್ರಸಾದ್ ಮತ್ತು ನಾಗರಾಜ್ ಅಣ್ಣೇಗೌಡ ಅವರು ಅನಧಿಕೃತವಾಗಿ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳನ್ನು ವಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ, ಅವರಿಗೆ ಆ ಸ್ಥಾನಗಳಿಂದ ತಕ್ಷಣವೇ ಕೆಳಗಿಳಿಯುವಂತೆ ನಿರ್ದೇಶನ ನೀಡಬೇಕು, ಸರ್ಕಾರಕ್ಕೆ ಆದಷ್ಟು ಶೀಘ್ರ ಐವರು ಸದಸ್ಯರ ನಾಮನಿರ್ದೇಶನ ಮಾಡುವಂತೆ ಸೂಚನೆ ನೀಡಬೇಕು'' ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ.

ಇದನ್ನೂ ಓದಿ:ಮೈಸೂರು ಅನಂತಸ್ವಾಮಿ ಸಂಯೋಜನೆಯಲ್ಲಿ ನಾಡಗೀತೆ ಹಾಡಬೇಕೆಂಬ ಸರ್ಕಾರದ ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ - Naada Geete

For All Latest Updates

ABOUT THE AUTHOR

...view details