ಕರ್ನಾಟಕ

karnataka

ETV Bharat / state

ಬೆಂಗಳೂರಿನ ಬೀದಿನಾಯಿಗಳಿಗೆ ಮೈಕ್ರೋಚಿಪ್ ಅಳವಡಿಕೆ ಪ್ರಶ್ನಿಸಿ ಅರ್ಜಿ: ಕೇಂದ್ರ, ರಾಜ್ಯ ಮತ್ತು ಬಿಬಿಎಂಪಿಗೆ ನೋಟಿಸ್ - HIGH COURT

ಬೀದಿ ನಾಯಿಗಳ ಸಂತಾನ ಹರಣಕ್ಕೆ ಅಳವಡಿಸುವ ಮೈಕ್ರೋಚಿಪ್  ರೀಡರ್‌ಗಳನ್ನು ಖರೀದಿಸಲು ಬಿಬಿಎಂಪಿ ಸಲ್ಲಿಸಿರುವ ಪ್ರಸ್ತಾವನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್ ಕೇಂದ್ರ, ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನೋಟಿಸ್ ಜಾರಿಮಾಡಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)

By ETV Bharat Karnataka Team

Published : Nov 19, 2024, 3:13 PM IST

ಬೆಂಗಳೂರು:ನಗರದ ಬೀದಿನಾಯಿಗಳ ಸಂತಾನ ಹರಣಕ್ಕೆ ಅಳವಡಿಸುವ ಮೈಕ್ರೋಚಿಪ್ ರೀಡರ್‌ಗಳನ್ನು ಖರೀದಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಲ್ಲಿಸಿರುವ ಪ್ರಸ್ತಾವನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್ ಕೇಂದ್ರ, ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿ ಆದೇಶಿಸಿದೆ.

ಸೇವ್ ಅವರ್ ಅನಿಮಲ್ಸ್ ಚಾರಿಟಬಲ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರ ವಿಭಾಗೀಯ ಪೀಠ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಪ್ರಾಣಿ ಕಲ್ಯಾಣ ಮಂಡಳಿ, ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ, ಮುಂದಿನ ವಿಚಾರಣೆ ವೇಳೆ ಎಲ್ಲ ಪ್ರತಿವಾದಿಗಳು ಅರ್ಜಿಗೆ ಸಂಬಂಧಿಸಿದಂತೆ ಲಿಖಿತ ಆಕ್ಷೇಪಣೆಗಳನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ಅರ್ಜಿದಾರರ ಪರ ವಕೀಲರ ವಾದವೇನು?:ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನಾಯಿಗಳಿಗೆ ಮೈಕ್ರೋಚಿಪ್ ಅಳವಡಿಕೆ ಸಂಬಂಧ ಪ್ರಸ್ತಾವನೆ ಸಲ್ಲಿಸುವುದಕ್ಕೆ ಬಿಬಿಎಂಪಿಗೆ ಅಧಿಕಾರವಿಲ್ಲ. ಜತೆಗೆ, ಆ ಕಾರ್ಯ ಬಿಬಿಎಂಪಿಯ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲದೇ, ಪ್ರಾಣಿ ಜನನ ನಿಯಂತ್ರಣ (ಎಬಿಸಿ) ನಿಯಮ 2023ರಲ್ಲಿ ಮೈಕ್ರೋಚಿಪ್​ಗಳನ್ನು ಖರೀದಿಸಿ ಬೀದಿ ನಾಯಿಗಳಿಗೆ ಅಳವಡಿಸಲು ಟೆಂಡರ್ ಕರೆಯುವುದಕ್ಕೆ ಅವಕಾಶವಿಲ್ಲ. ಇದು ಸಾಕು ನಾಯಿಗಳಿಗೆ ಮಾತ್ರ ಅವಕಾಶವಿದೆ ಎಂದು ಪೀಠಕ್ಕೆ ವಿವರಿಸಿದರು.

ಅಲ್ಲದೇ, ಬಿಬಿಎಂಪಿಗೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಿಂದ ಅನುಮತಿ ಪಡೆದಿಲ್ಲ. ಕೇಂದ್ರ ಸಮಿತಿಯನ್ನೂ ಸಂಪರ್ಕಿಸಿಲ್ಲ. ಈ ಸಂಬಂಧ ಹರಾಜು ಪ್ರಕ್ರಿಯೆ ಪ್ರಾರಂಭಿಸುವುದಕ್ಕೆ ಬಿಬಿಎಂಪಿಗೆ ಅಧಿಕಾರವಿಲ್ಲ. ಹರಾಜು ಪ್ರಕ್ರಿಯೆ ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ಮೈಕ್ರೋಚಿಪ್ ಅಳವಡಿಸುವುದು ಬೀದಿ ನಾಯಿಗಳ ಮೆಲೆ ಮಾಡುವ ದಾಳಿಯಾಗಿದೆ. ಇದಕ್ಕೆ ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಮೈಕ್ರೋಚಿಪ್ ಅಳವಡಿಸುವುದಕ್ಕೆ ಸಂಬಂಧಿಸಿದೆ ಬಿಬಿಎಂಪಿ 2024ರ ಫೆಬ್ರವರಿ 29ರಂದು ಹೊರಡಿಸಿರುವ ಪ್ರಸ್ತಾವನೆ ರದ್ದುಗೊಳಿಸಬೇಕು ಮತ್ತು ಟೆಂಡರ್ ಅಧಿಸೂಚನೆಗಳನ್ನು ಹೊರಡಿಸುವಾಗ ಪ್ರಾಣಿ ಜನನ ನಿಯಂತ್ರಣ ನಿಯಮಗಳು, 2023 ಅನ್ನು ಅನುಸರಿಸಲು ನಿಗಮಕ್ಕೆ ನಿರ್ದೇಶನ ನೀಡಬೇಕು ಮತ್ತು ಬೆಂಗಳೂರಿನಲ್ಲಿ ನಡೆಯುತ್ತಿರುವ ಬೀದಿ ನಾಯಿಗಳ ಮೈಕ್ರೋಚಿಪ್ಪಿಂಗ್ ಪ್ರಾಯೋಗಿಕ ಯೋಜನೆಯನ್ನು ತಕ್ಷಣ ತಡೆ ನೀಡಬೇಕು ಎಂದು ಕೋರಿದರು. ಅಲ್ಲದೇ, ನಿಯಮಗಳನ್ನು ಉಲ್ಲಂಘಿಸಿ ಪ್ರಸ್ತಾವನೆ ಸಲ್ಲಿಸುವುದು ಮತ್ತು ಟೆಂಡರ್ ಪ್ರಕ್ರಿಯೆ ನಡೆಸಿರುವ ಬಿಬಿಬಿಎಂಪಿಗೆ ದೊಡ್ಡ ಮಟ್ಟದ ದಂಡ ವಿಧಿಸಬೇಕು ಎಂದು ವಕೀಲರು ಪೀಠಕ್ಕೆ ಮನವಿ ಮಾಡಿದರು.

ಈ ವೇಳೆ, ಯಾವ ಕಾರಣಕ್ಕಾಗಿ ಚಿಪ್‌ಗಳನ್ನು ಅಳವಡಿಸಲಾಗುತ್ತಿದೆ ಎಂದು ಪೀಠ ಪ್ರಶ್ನಿಸಿತು, ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು, ಬೆಂಗಳೂರಿನಲ್ಲಿ ಬೀದಿ ನಾಯಿಗಳನ್ನು ನಿಯಂತ್ರಿಸುವ ಉದ್ದೇಶವಾಗಿದೆ ಎಂದು ವಿವರಿಸಿದರು. ಇದಕ್ಕೆ ಪೀಠ ಬೀದಿ ನಾಯಿಗಳನ್ನು ನಿಯಂತ್ರಿಸಲು ಯಾವುದೇ ಆಕ್ಷೇಪಣೆ ಇರಬಾರದು ಎಂದು ಮೌಖಿಕವಾಗಿ ತಿಳಿಸಿ ವಿಚಾರಣೆ ಮುಂದೂಡಿತು.

ಇದನ್ನೂ ಓದಿ:ಸಮಾಜ ವಿಜ್ಞಾನ, ಭಾಷಾ ಶಿಕ್ಷಕರ ಕರ್ತವ್ಯ ನಿರ್ವಹಣೆಗೆ ಅಂಧತ್ವ ಅಡ್ಡಿಯಾಗದು: ಹೈಕೋರ್ಟ್

ABOUT THE AUTHOR

...view details