ಬೆಂಗಳೂರು: ಲೈಂಗಿಕ ಕಿರುಕುಳ ಪ್ರಕರಣದ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಹಂಗರಹಳ್ಳಿಯ ಶ್ರೀವಿದ್ಯಾ ಚೌಡೇಶ್ವರಿ ದೇವಸ್ಥಾನದ ಬಾಲ ಮಂಜುನಾಥ ಸ್ವಾಮೀಜಿ ವಿರುದ್ಧದ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿತು.
ಸ್ವಾಮೀಜಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರ ಸ್ವಾಮೀಜಿ ಪರ ವಕೀಲರು, ಸ್ವಾಮೀಜಿ ವಿರುದ್ಧ ಹುಲಿಯೂರು ದುರ್ಗ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಆಧಾರರಹಿತ ಮತ್ತು ಕಾನೂನುಬಾಹಿರ. ಮೇಲ್ನೋಟಕ್ಕೆ ಇದು ದುರುದ್ದೇಶಪೂರಿತ ಮತ್ತು ಸುಳ್ಳು ಅಂಶಗಳಿಂದ ಆವೃತವಾಗಿದೆ. ಸ್ವಾಮೀಜಿಯ ವ್ಯಕ್ತಿತ್ವ ಮತ್ತು ಕೀರ್ತಿಗೆ ಧಕ್ಕೆ ತರುವಂತಿದೆ ಎಂದರು.
ಸ್ವಾಮೀಜಿ ಸಂತ್ರಸ್ತ ಬಾಲಕಿಗೆ ಬೆದರಿಕೆ ಹಾಕಿದ್ದಾರೆ ಎಂಬುದನ್ನು ದೂರಿನಲ್ಲಿ ಎಲ್ಲೂ ಪ್ರಸ್ತಾಪಿಸಿಲ್ಲ. ಪ್ರಾಸಿಕ್ಯೂಷನ್ ವಿನಾಕಾರಣ ದೂರಿನ ವ್ಯಾಪ್ತಿಯಿಂದ ಆಚೆಗೆ ಸಲ್ಲದ ಆರೋಪಗಳನ್ನು ಹೊರಿಸುತ್ತಿದೆ. ಆದ್ದರಿಂದ, ಎಫ್‌ಐಆರ್ ರದ್ದುಪಡಿಸಬೇಕು ಮತ್ತು ವಿಚಾರಣಾ ನ್ಯಾಯಾಲಯದಲ್ಲಿ ಪ್ರಕ್ರಿಯೆ ರದ್ದುಗೊಳಿಸಬೇಕು ಎಂದು ಕೋರಿದರು. ಈ ಅಂಶವನ್ನು ದಾಖಲಿಸಿಕೊಂಡ ಪೀಠ, ವಿಚಾರಣಾ ಕೋರ್ಟ್ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿತು.