ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಎಸ್ಟೇಟ್ ರೂರಲ್ ಇಂಡಸ್ಟ್ರೀ ಅಸೋಸಿಯೇಷನ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ ಸೇರಿದ ಪ್ಲಾಂಟೇಷನ್ ಲ್ಯಾಂಡ್ನ್ನು (ತೋಟದ ಜಮೀನು) ಬಿಟ್ಟುಕೊಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ನ್ಯಾಯಾಲಯದ ನಿರ್ದೇಶನದಂತೆ ತಮ್ಮ ಜಮೀನನ್ನು ವಶಪಡಿಸಿಕೊಂಡು ಸರ್ಕಾರದ ಸ್ವಾಧೀನಕ್ಕೆ ಒಪ್ಪಿಸಬೇಕು ಎಂದು ತಹಶೀಲ್ದಾರರಿಗೆ ಸೂಚಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ 2008ರ ಜನವರಿ 17ರಂದು ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ನೆರಿಯ ಎಸ್ಟೇಟ್ ರೂರಲ್ ಇಂಡಸ್ಟ್ರೀ ಅಸೋಸಿಯೇಷನ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನೆರಿಯ ಗೋಪಾಲಕೃಷ್ಣ ಹೆಬ್ಬಾರ್ ಮೇಲ್ಮನವಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಅಲ್ಲದೇ, ನೆರಿಯ ಎಸ್ಟೇಟ್ ರೂರಲ್ ಇಂಡಸ್ಟ್ರೀ ಅಸೋಸಿಯೇಷನ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ ಸೇರಿದ ಜಮೀನು ಸರ್ಕಾರದ ಸ್ವಾಧೀನದಲ್ಲಿದೆ ಎಂದು ಹೇಳಲಿಕ್ಕಾಗದು ಎಂದು ಹೇಳಿರುವ ಹೈಕೋರ್ಟ್, ಈ ಜಮೀನಿನ ಮೇಲೆ ಸರ್ಕಾರ ಯಾವುದೇ ಮಾಲೀಕತ್ವ ಅಥವಾ ಸ್ವಾಧೀನದ ಹಕ್ಕು ಹೊಂದುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಜೊತೆಗೆ, ಜಿಲ್ಲಾಧಿಕಾರಿಗಳ ಆದೇಶವನ್ನು ಎತ್ತಿಹಿಡಿದು 2017ರ ಮೇ 29ರಂದು ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಮತ್ತು ಈ ಹಿಂದೆ ನ್ಯಾಯಾಲಯ ನೀಡಿದ್ದ ಆದೇಶದಂತೆ 2007ರ ಆಗಸ್ಟ್ 21ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ರದ್ದುಪಡಿಸಿ ಆದೇಶಿಸಿದೆ. ಅಲ್ಲದೇ, ಮುಂದಿನ ಮೂರು ತಿಂಗಳಲ್ಲಿ ಮೇಲ್ಮನವಿದಾರರ ಹೆಸರನ್ನು ಕಂದಾಯ ದಾಖಲೆಗಳಲ್ಲಿ ಸೇರಿಸಬೇಕು ಎಂದೂ ಹೈಕೋರ್ಟ್ ಆದೇಶಿಸಿದೆ.