ಬೆಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರು ತನಿಖೆ ಕೋರಿಕೆ ಮತ್ತು ಸಿಬಿಐ ವಿಶೇಷ ಮಕ್ಕಳ ನ್ಯಾಯಾಲಯದ ಆದೇಶ ರದ್ದುಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ವಿದ್ಯಾರ್ಥಿನಿಯ ತಂದೆ ಧರ್ಮಸ್ಥಳದ ನಿವಾಸಿ ಚಂದಪ್ಪ ಗೌಡ, ಖುಲಾಸೆಗೊಂಡಿರುವ ಕಾರ್ಕಳ ತಾಲೂಕಿನ ಕುಕ್ಕುಂದೂರಿನ ಸಂತೋಷ್ ರಾವ್ ಹಾಗೂ ಸಿಬಿಐ ಪ್ರತ್ಯೇಕವಾಗಿ ಸಲ್ಲಿಸಿರುವ ಮೂರು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ಪೀಠ ನಡೆಸಿದೆ.
ಸಿಬಿಐ ಪರವಾಗಿ ವಾದಿಸಿದ ವಿಶೇಷ ಸರ್ಕಾರಿ ಅಭಿಯೋಜಕರಾಗಿರುವ ಪಿ.ಪ್ರಸನ್ನ ಕುಮಾರ್, ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ನಡೆದ ಎರಡನೇ ದಿನಕ್ಕೆ ಆರೋಪಿ ಸಂತೋಷ್ ರಾವ್ನನ್ನು ಬಂಧಿಸಲಾಗಿತ್ತು. ಆತ ಆ ಊರಿನವನಲ್ಲ. ಘಟನಾ ಸ್ಥಳದಲ್ಲಿ ಇದ್ದಿದ್ದೇಕೆ ಎಂಬುದಕ್ಕೆ ಆತ ವಿವರಣೆ ನೀಡಿಲ್ಲ. ಘಟನಾ ಸ್ಥಳದಲ್ಲಿ ಬಿಳಿ ಪಂಚೆ ವಶಕ್ಕೆ ಪಡೆಯಲಾಗಿದ್ದು, ಅದರಲ್ಲಿ ಆತನ ಕೇಶ ಸಿಕ್ಕಿದೆ.
ಈ ಕೂದಲು ಆತನದೇ ಎಂಬುದಾಗಿ ಡಿಎನ್‌ಎ ವರದಿಯಲ್ಲಿ ರುಜುವಾತಾಗಿದೆ. ಇದಕ್ಕೆ ಪಾಟೀ ಸವಾಲಿನ ಸಂದರ್ಭದಲ್ಲಿ ಆತ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ವಾದಿಸಿದ್ದಾರೆ. ಸಂತೋಷ್ ರಾವ್ ಬೆನ್ನಿನಲ್ಲಿ ಉಗುರಿನಿಂದ ಪರಚಿದ ಗಾಯವಾಗಿದೆ. ಈ ರೀತಿ ಎಲ್ಲಿ ಆಯ್ತು ಎಂಬುದನ್ನು ಆತ ಹೇಳಿಲ್ಲ. ಮಂಡಿಯಲ್ಲಿ ಗಾಯವಾಗಿತ್ತು. ಅದನ್ನೂ ಹೇಳಿಲ್ಲ. ಇವೆಲ್ಲವೂ ವೈದ್ಯಕೀಯ ದಾಖಲೆಗಳಾಗಿವೆ. ಹೀಗಾಗಿ, ಆತನೇ ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾನೆ.
ಸಂತೋಷ್ ರಾವ್ ಮತ್ತು ಸೌಜನ್ಯ ತಂದೆ ಚಂದಪ್ಪ ಗೌಡ ಅವರು ಪ್ರಕರಣದ ಮರು ತನಿಖೆಗೆ ಮನವಿ ಮಾಡಿದ್ದಾರೆ. ಈ ಹಿಂದೆ ಸೌಜನ್ಯ ತಂದೆಯೇ ಮರು ತನಿಖೆಗೆ ಕೋರಿದ್ದರು. ಈ ವಿಚಾರವನ್ನು ಹಿಂದೆಯೇ ಹೈಕೋರ್ಟ್ ಬೇರೊಂದು ಪೀಠ ನಿರ್ಧರಿಸಿದ್ದು, ಮರು ತನಿಖೆಗೆ ನಿರಾಕರಿಸಿತ್ತು. ಈಗ ಅದೇ ಪರಿಹಾರ ಕೋರಲಾಗದು. ಪ್ರಕರಣದಲ್ಲಿ ಆರೋಪಿಯಾಗಿರುವ ಸಂತೋಷ್ ಯಾರು ಎಂದು ತನಿಖೆ ನಡೆಸಬೇಕು ಎಂದು ಕೋರಲಾಗದು. ಹೀಗಾಗಿ, ಆತನ ಅರ್ಜಿಯನ್ನು ವಜಾ ಮಾಡಬೇಕು ಎಂದು ಮನವಿ ಮಾಡಿದರು. ವಾದ ಆಲಿಸಿರುವ ಪೀಠ, ತೀರ್ಪು ಕಾಯ್ದಿರಿಸಿದೆ.
ಇದನ್ನೂ ಓದಿ:ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಪ್ರಜ್ವಲ್ ರೇವಣ್ಣ - Prajwal Revanna